(ನ್ಯೂಸ್ ಕಡಬ) newskadaba.com ಕಡಬ, ಜ. 15. ತಾಲೂಕಿನ ಇಚಿಲಂಪಾಡಿ ಸೇತುವೆ ಸಮೀಪದಿಂದ ಹಗಲು ರಾತ್ರಿಯೆನ್ನದೆ ನಿರಂತರವಾಗಿ ಅಕ್ರಮ ಮರಳುಗಾರಿಕೆ ನಡೆಯುತ್ತಿದ್ದು, ಇದಕ್ಕೆ ಇದೀಗ ಕಡಬ ಠಾಣಾ ಎಸ್.ಐ ರುಕ್ಮ ನಾಯಕ್ ಬ್ರೇಕ್ ಹಾಕಿದ್ದಾರೆ.
ಕಳೆದ ಒಂದು ತಿಂಗಳಿನಿಂದ ರಾಜಾರೋಷವಾಗಿ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದರೂ ಗ್ರಾ.ಪಂ ಅಧಿಕಾರಿಗಳಾಗಲಿ, ಕಂದಾಯ ಇಲಾಖೆಯಾಗಲಿ ತಡೆಯುವಲ್ಲಿ ಸಫಲವಾಗಿಲ್ಲ. ಮರಳು ಸಾಗಾಟಗಾರರು ಪೊಲೀಸರ ಹೆಸರು ದುರ್ಬಳಕೆ ಮಾಡಿಕೊಂಡು ವಾಹನಗಳಲ್ಲಿ ನಿರಂತರ ಮರಳು ಸಾಗಾಟದಲ್ಲಿ ನಿರತರಾಗಿದ್ದರು. ಈ ವಿಚಾರ ಸಾರ್ವಜನಿಕರ ಮೂಲಕ ಪೊಲೀಸ್ ಇಲಾಖೆಯ ಗಮನಕ್ಕೆ ಬರುತ್ತಿದ್ದಂತೆಯೇ ಮಾಹಿತಿ ಕಲೆ ಹಾಕಿದ ಕಡಬ ಠಾಣಾ ಎಸ್.ಐ ರುಕ್ಮ ನಾಯ್ಕ್ ಜ. 14ರಂದು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಅನಧಿಕೃತ ರಸ್ತೆಗಳನ್ನು ಜೆಸಿಬಿ ಮುಖಾಂತರ ಮುಚ್ಚಿಸಿದ್ದಾರೆ. ಠಾಣಾ ವ್ಯಾಪ್ತಿಯ ಎಲ್ಲಾ ಮರಳು ನಿಕ್ಷೇಪಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು ಅಕ್ರಮ ಮರಳುಗಾರಿಕೆ ಕಂಡು ಬಂದಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಎಸ್.ಐ ಎಚ್ಚರಿಕೆ ನೀಡಿದ್ದಾರೆ.