ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾ| ಘಟಕದಿಂದ ಪ್ರಬಂಧ, ಕವನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ➤ ಕನ್ನಡವನ್ನು ಉಳಿಸುವ ಕೆಲಸ ಮನೆಯಿಂದಲೇ ಆರಂಭಗೊಳ್ಳಲಿ -ಭವ್ಯಾ ಪಿ.ಆರ್

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 14. ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಇದರ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸಲಾದ ಪ್ರಬಂಧ ಹಾಗೂ ಕವನ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭ ಜ.8ರಂದು ದರ್ಬೆ ಸಂತೃಪ್ತಿ ಹೊಟೇಲ್ ಮುಂಭಾಗದ ಸಣ್ಣ ಕೈಗಾರಿಕಾ ಸಹಕಾರಿ ಸಂಘದ ಕೈಗಾರಿಕಾ ಸಹಕಾರಿ ಭವನದಲ್ಲಿ ನಡೆಯಿತು.

ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸುದೇಶ್ ಕುಮಾರ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೊರೋನಾ ಕಾಲಘಟ್ಟದಲ್ಲಿಯು ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರಿನ ಘಟಕವು ತಾಲೂಕಿನ ಜನರಿಗಾಗಿ ವಿಶೇಷ ಸ್ಪರ್ಧೆಯನ್ನು ನಡೆಸಿ ಗಮನ ಸೆಳೆದಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರು ಮುಂದೆಯೂ ತಮ್ಮ ಬರವಣಿಗೆಯನ್ನು ಮುಂದುವರಿಸಿ ಆ ಮೂಲಕ ದೇಶವೇ ಗುರುತಿಸುವಂತಾಗಲಿ ಎಂದು ಹೇಳಿದರು.  ವಿಶೇಷ ಉಪನ್ಯಾಸ ನೀಡಿದ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮದ ಉಪನ್ಯಾಸಕಿ ಭವ್ಯ ಪಿ.ಆರ್ ನಿಡ್ಪಳ್ಳಿ ರವರು ಮಾತನಾಡಿ, ದೈನಂದಿನ ಜೀವನದಲ್ಲಿ ಕನ್ನಡವನ್ನು ಮರೆಯುತ್ತಿರುವ ನಾವು ಅದರ ಬದಲು ಅನ್ಯ ಭಾಷೆಯತ್ತ ಹೆಚ್ಚು ಸೆಳೆತಕ್ಕೆ ಒಳಗಾಗಿದ್ದೇವೆ. ಕನ್ನಡವನ್ನು ಉಳಿಸಿ ಬೆಳೆಸಬೇಕಾದ ಅಗತ್ಯ ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ಕನ್ನಡವನ್ನು ಉಳಿಸುವ ಕೆಲಸ ಮನೆಯಿಂದ ಆರಂಭಿಸಬೇಕು. ನಮ್ಮ ದಿನನಿತ್ಯದ ಜೀವನದಲ್ಲಿ ಅದನ್ನು ಬಳಸಿದಾಗ ಅದು ಉಳಿಯುತ್ತದೆ ಎಂದು ಹಲವಾರು ದೃಷ್ಟಾಂತಗಳನ್ನು ತಿಳಿಸುವ ಮೂಲಕ ವಿವರಿಸಿದರು.

ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಿಸಿದ ಪದ್ಮಶ್ರೀ ಸೋಲಾರ್ ಸಿಸ್ಟಮ್‍ ನ ಮ್ಹಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ಮಾತನಾಡಿ ಸ್ಪರ್ಧಾತ್ಮಕ ಮನೋಭಾವದೊಂದಿಗೆ ಪ್ರತಿಯೊಬ್ಬರು ಪ್ರಯತ್ನಿಸಿದಾಗ ನಮಗೆ ಗೆಲುವು ಖಚಿತ. ಅಂತಹ ಮನಸ್ಥಿತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಘಟಕದ ಅಧ್ಯಕ್ಷ ಯೂಸುಫ್ ರೆಂಜಲಾಡಿ ಮಾತನಾಡಿ ನಮ್ಮ ಸಂಘವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಸಾಮಾಜಿಕ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು. ಕರ್ನಾಟಕ ಪತ್ರಕರ್ತರ ಸಂಘದ ತಾಲೂಕು ಘಟಕದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ವಾಗತಿಸಿ ಪ್ರಸ್ತಾವನೆಗೈದ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ್  ರೈ ಅನಿ ಕೂಟೇಲುರವರು ನಾವು ಹಮ್ಮಿಕೊಂಡ ಸ್ಪರ್ಧೆಗೆ ನಮ್ಮ ನಿರೀಕ್ಷೆಗೂ ಮೀರಿದ ಸ್ಪರ್ಧಾರ್ಥಿಗಳು ಪ್ರಬಂಧ, ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿ ಸಂಘ ನಡೆಸಿಕೊಂಡು ಬಂದಿರುವ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಸಂಘದ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ ಮಾರಂಗ ವಂದಿಸಿದರು. ಉಪಾದ್ಯಕ್ಷೆ ಶೈಲಜಾ ಸುದೇಶ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸದಸ್ಯೆ ರಕ್ಷಿತಾ ಪ್ರಾರ್ಥಿಸಿದರು. ಸಂಘದ ಜತೆ ಕಾರ್ಯದರ್ಶಿ ಜನಾರ್ಧನ ಮಚ್ಚಿಮಲೆ, ಕೋಶಾಧಿಕಾರಿ ನರೇಶ್ ಜೈನ್, ಸಂಘದ ಸದಸ್ಯರಾದ ಹಿಲರಿ ಡಿಸೋಜ, ಚಂದ್ರಶೇಖರ್, ಶ್ರೀಧರ್, ಮೋಹನ್, ಶರತ್ ಕುಮಾರ್ ಪಾರ, ಶಿವಕುಮಾರ್ ಈಶ್ವರಮಂಗಲ, ಫಾರೂಕ್ ಶೇಖ್ ಮುಕ್ವೆ, ಮೋಹನ್, ರವೀಂದ್ರ ಕಬಕ, ಅಕ್ಷತಾ, ರಾಜೇಶ್ ಸಂಪ್ಯಾಡಿ, ಇಬ್ರಾಹಿಂ ಖಲೀಲ್ ಸಹಕರಿಸಿದರು. ಪ್ರಶಸ್ತಿ ವಿಜೇತರ ಪೋಷಕರು, ಸಂಘದ ಹಿತೈಷಿಗಳು, ಸಣ್ಣ ಕೈಗಾರಿಕಾ ಸಹಕಾರಿ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಕ.ಸಾ.ಪ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್‍ ರವರು ಬಹುಮಾನದ ರೂಪದಲ್ಲಿ ಪುಸ್ತಕವನ್ನು ನೀಡಿ ಸಹಕರಿಸಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ಕರ್ನಾಟಕ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷ ಉಮೇಶ್ ಮಿತ್ತಡ್ಕ, ರಾಜ್ಯಶಾಸ್ತ್ರ ಉಪನ್ಯಾಸಕ ಲಕ್ಷ್ಮೀಕಾಂತ್ ರೈ ಅನಿಕೂಟೇಲು ಹಾಗೂ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಸುಜಾತಾ ಎಂ. ಕೆ ಸಹಕರಿಸಿದರು.

Also Read  ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ ಇತ್ತಂಡಗಳ ನಡುವೆ ಹೊಡೆದಾಟ ➤ 8 ಮಂದಿಯ ವಿರುದ್ದ FIR

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದಿಂದ ಎರಡು ವಿಭಾಗದಲ್ಲಿ ಪ್ರಬಂಧ ಹಾಗೂ ಕವನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಕಾಲೇಜು ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ವಿವೇಕಾನಂದ ಕಾಲೇಜಿನ ತೃತೀಯ ಬಿ.ಎಸ್ಸಿ ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಬಿ, ದ್ವಿತೀಯ ಸ್ಥಾನವನ್ನು ಅಂಬಿಕಾ ಪದವಿಪೂರ್ವ ವಿದ್ಯಾಲಯದ  ಶ್ರೀಕನ್ಯ ಕೆ. ಎಚ್, ತೃತೀಯ ಸ್ಥಾನವನ್ನು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಖದೀಜತ್  ದಿಲ್ಶಾನಾ ಪಡೆದುಕೊಂಡರು. ಸಾರ್ವಜನಿಕ ವಿಭಾಗದ ಪ್ರಬಂಧ  ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪುತ್ತೂರು ಗ್ರಂಥಾಲಯ ಸಹಾಯಕ ಸುಂದರ ಪಿ., ದ್ವಿತೀಯ ಸ್ಥಾನವನ್ನು ಸುರೇಶ್ ಒಡಬಾಯಿ ಕಾಣಿಯೂರು, ತೃತೀಯ ಸ್ಥಾನವನ್ನು ವಿಟ್ಲ ಪಿ.ಯು ಕಾಲೇಜು ಉಪನ್ಯಾಸಕಿ ವಿಶಾಲಾಕ್ಷಿ ಪಿ, ಪಡೆದುಕೊಂಡರು.  ಸಾರ್ವಜನಿಕ ವಿಭಾಗದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶೋಭಾ ಕೆ. ಪುತ್ತೂರು, ದ್ವಿತೀಯ ಸ್ಥಾನವನ್ನು ಜನಾರ್ಧನ ದುರ್ಗಾ ನಿಡ್ಪಳ್ಳಿ, ತೃತೀಯ ಸ್ಥಾನವನ್ನು ಆಯಿಶತ್ ಶಮಾ ಬಡಕ್ಕೋಡಿ ಪಡೆದುಕೊಂಡರು. ಹೈಸ್ಕೂಲ್ ವಿಭಾಗದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕೊಂಬೆಟ್ಟು ಸ.ಪ್ರೌ.ಶಾಲೆಯ ಹರ್ಷಿತಾ ಕುಮಾರಿ, ದ್ವಿತೀಯ ಸ್ಥಾನವನ್ನು ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಸೌಮ್ಯ ಕೆ, ತೃತೀಯ ಸ್ಥಾನವನ್ನು ದರ್ಬೆತಡ್ಕ ಉ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿನಿ ಮೋಕ್ಷಿತಾರವರು ಪಡೆದುಕೊಂಡರು. ವಿಜೇತರಿಗೆ ನಗದು, ಪ್ರಶಸ್ತಿ ಪತ್ರ, ಪುಸ್ತಕ ಹಾಗೂ ಸ್ಮರಣಿಕೆಯನ್ನು ನೀಡಲಾಯಿತು.

Also Read  ಇಂದಿನಿಂದ ಎಂಡೋಸಲ್ಫಾನ್ ಸಂತ್ರಸ್ತರಿಗೆ ತಪಾಸಣಾ ಶಿಬಿರ ➤ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಕಾರ

 

ಕರ್ನಾಟಕ ಪತ್ರಕರ್ತರ ಸಂಘ ಪುತ್ತೂರು ತಾಲೂಕು ಘಟಕವು ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಕ್ರಮದ ಮೂಲಕ ಗುರುತಿಸಿಕೊಂಡಿದೆ. ಶೈಕ್ಷಣಿಕವಾಗಿಯೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಬಂಧ ಹಾಗೂ ಕವನ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಿದ್ದೇವೆ.  ತಾಲೂಕಿನ ಪ್ರತಿಭೆಗಳನ್ನು ಗುರುತಿಸುವ ಕೆಲಸವನ್ನು ಸದಾ ನಮ್ಮ ಸಂಘ ನಡೆಸಲಿದೆ.

Also Read  ಮಂಗಳೂರು: ಹೂಡಿಕೆಯ ಮೇಲೆ ಅಧಿಕ ಲಾಭಾಂಶದ ಆಮಿಷ ➤ 1.64 ಲಕ್ಷ ರೂ. ವಂಚನೆ

-ಯೂಸುಫ್ ರೆಂಜಲಾಡಿ, ಅಧ್ಯಕ್ಷರು

error: Content is protected !!
Scroll to Top