(ನ್ಯೂಸ್ ಕಡಬ) newskadaba.com ಮಂಗಳೂರು, ಜ. 13. ಕೋವಿಡ್ 19 ಸೊಂಕು ನಿರೋಧಕ ಲಸಿಕೆಯು ಜನವರಿ 16 ರಿಂದ ಅಧಿಕೃತವಾಗಿ ಆರಂಭವಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ ಹೇಳಿದರು.
ತಾಲೂಕು ಚಾಲನಾ ಸಮಿತಿ ಸಭೆಯನ್ನು ಮಿನಿ ವಿಧಾನಸೌಧ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಉಪ ತಹಶೀಲ್ದಾರ್ ಜಯಂತ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಯಿತು. ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಭಂಡಾರಿ ಮಾತನಾಡಿ, ಈಗಾಗಲೇ ಡ್ರೈರನ್ ಕಾರ್ಯಕ್ರಮ ಯಶಸ್ವಿಯಾಗಿದ್ದು, ಜಿಲ್ಲೆಯಲ್ಲಿ ವೆನ್‍ಲಾಕ್ ಆಸ್ಪತ್ರೆ, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ ತಾಲೂಕು ಆಸ್ಪತ್ರೆ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ(ಸುರತ್ಕಲ್)ದಲ್ಲಿ ಕೋವಿಡ್ ಲಸಿಕಾ ಶೇಖರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದರು. ಒಂದು ಶಿಬಿರದಲ್ಲಿ 100 ನೊಂದಾಯಿತರಿಗೆ ಲಸಿಕೆ ನೀಡಲಾಗುತ್ತದೆ.ಮೊದಲಿಗೆ 1 ಕೋಟಿಯಷ್ಟಿರುವ ಆರೋಗ್ಯ ಸಿಬ್ಬಂದಿ ಹಾಗೂ ಮುಂಚೂಣಿಯಲ್ಲಿರುವ ಕರೋನಾ ಹೋರಾಟಗಾರರಿಗೆ ಲಸಿಕೆ ನೀಡಲಾಗುವುದು. ನಂತರ ಆರೋಗ್ಯ ಸಮಸ್ಯೆ ಹೊಂದಿರುವ ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು 26 ಕೋಟಿ ಜನರಿಗೆಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಲಸಿಕೆ ಪಡೆಯುವ ಮೊದಲು ಕೋವಿನ್ ಆ್ಯಪ್ ನಲ್ಲಿ ನೊಂದಾಯಿತರಾಗಿರಬೇಕು. ಅದರಂತೆ ನೊಂದಾಯಿತ ವ್ಯಕ್ತಿಯು ಲಸಿಕೆ ಪಡೆಯುವ ದಿನಾಂಕ ಹಾಗೂ ಗುರುತಿನ ಸಂದೇಶವನ್ನು ಪಡೆದುಕೊಳ್ಳಬೇಕು ಎಂದರು. ಆರೋಗ್ಯ ಸಿಬ್ಬಂದಿ ವರ್ಗದಲ್ಲಿ ನರ್ಸ್ ಮತ್ತು ಸುಪರ್ ವೈಸರ್, ಮೆಡಿಕಲ್ ಮತ್ತು ಪ್ಯಾರಾ ಮೆಡಿಕಲ್, ಕ್ಲಿನಿಕ್, ಲ್ಯಾಬೋರೇಟರಿ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಕೋವಿಡ್ ಲಸಿಕಾ ಅವಕಾಶ ಕಲ್ಪಿಸಲಾಗಿದೆ ಎಂದರು. ಮತದಾನ ಪ್ರಕ್ರಿಯೆಯಂತೆ ಕೋವಿಡ್ ಲಸಿಕಾ ಕಾರ್ಯಕ್ರಮ ನಡೆಯಲಿದ್ದು, ನಿರೀಕ್ಷಣಾ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿ ಎಂಬ ಮೂರು ಕೊಠಡಿಗಳನ್ನು ರಚಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆ ವೆರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಹಂಚಿಕೆಯ ಸಂದರ್ಭದಲ್ಲಿ ಲಸಿಕೆ ಪಡೆಯುವವರ ಮಾಹಿತಿ, ಲಸಿಕೆ ಹಾಕುವ ಹಾಗೂ ಲಸಿಕೆ ಹಾಕಿದ ನಂತರ ಅರ್ಧ ಗಂಟೆ ನಿಗಾ ಘಟಕದಲ್ಲಿರುವಂತೆ ಪೂರ್ವತಯಾರಿ ಮಾಡಲಾಗಿದೆ ಎಂದು ಹೇಳಿದರು. ಸಭೆಯಲ್ಲಿ ತಾಲೂಕು ಪಂಚಾಯತ್ ವ್ಯವಸ್ಥಾಪಕರಾದ ಪ್ರತಿಭಾ, ಇತರೆ ಇಲಾಖಾಧಿಕಾರಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಅಧ್ಯಕ್ಷರು ಉಪಸ್ಥಿತರಿದ್ದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಲಿಯಮ್ಮ ಸ್ವಾಗತಿಸಿ, ವಂದಿಸಿದರು.