(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬಿಡುಗಡೆಗೊಳಿಸಿದ ನೂತನ ಬ್ಯಾರಿ ಲಿಪಿ ಹಾಗೂ ಬ್ಯಾರಿ ಸಂಖ್ಯೆಯನ್ನು ಬಳಸಿಕೊಂಡು 2021ರ ಹೊಸ ವರ್ಷದ ಕ್ಯಾಲೆಂಡರನ್ನು (ಬ್ಯಾರಿ ನಾಲ್ ಕನಕ್ಕ್) ಗುರುವಾರ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಕ್ಯಾಲೆಂಡರ್ ಬಿಡುಗಡೆಗೊಳಿಸಿದ ನಂತರ ಅವರು ಮಾತನಾಡಿ, ಪ್ರತಿ ಬ್ಯಾರಿ ಭಾಷಿಕರು ಸುಲಭವಾಗಿ ಮತ್ತು ಸರಳವಾಗಿ ನೂತನ ಬ್ಯಾರಿ ಲಿಪಿಯನ್ನು ಕಲಿಯಲು ಹಾಗೂ ನೆನಪಿನಲ್ಲಿಟ್ಟುಕೊಳ್ಳಲು ಈ ಕ್ಯಾಲೆಂಡರ್ ಸಹಕಾರಿಯಾಗಿದೆ. ನೂತನ ಕ್ಯಾಲೆಂಡೆರಿನ ಐತಿಹಾಸಿಕ ಹೆಜ್ಜೆಗೆ ಬ್ಯಾರಿ ಭಾಷಿಕರು ಬ್ಯಾರಿ ಹಾಗೂ ಬ್ಯಾರಿಯೇತರ ಭಾಷಿಕರು ಸಹಕಾರ ನೀಡಬೇಕೆಂದು ಎಂದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ ಬಶೀರ್ ತಂಡೆಲ್, ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯರಾದ ಶಂಶೀರ್ ಬುಡೋಳಿ, ರೂಪಾಶ್ರೀ ವರ್ಕಾಡಿ ಉಪಸ್ಥಿತರಿದ್ದರು.