ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ಸ್ಮಾರ್ಟ್ ಫೋನ್ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 02. ಕೋವಿಡ್-19 ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮೇಲ್ವಿಚಾರಕಿಯರು ಜೀವದ ಹಂಗು ತೊರೆದು , ಕೊರೊನಾ ನಿಯಂತ್ರಣಕ್ಕೆ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ತಿಳಿಸಿದರು. ಅವರು ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ ಸ್ಮಾರ್ಟ್‍ ಫೋನ್ ವಿತರಣಾ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದರು.


ಪೋಷಣ ಅಭಿಯಾನ ಯೋಜನೆಯು ಕುಂಠಿತ ಬೆಳವಣಿಗೆ, ಅಪೌಷ್ಠಿಕತೆ, ರಕ್ತಹೀನತೆ, ಕಡಿಮೆ ತೂಕದ ಮಕ್ಕಳ ಜನನವನ್ನು ಕಡಿಮೆಗೊಳಿಸುವುದಾಗಿದ್ದು, ಈ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2018ರ ಮಾರ್ಚ್ 8ರಂದು ರಾಜಸ್ಥಾನದ ಜುಂಜುನು ಗ್ರಾಮದಲ್ಲಿ ಚಾಲನೆ ನೀಡಿದ್ದರು. ಕೇಂದ್ರ ಪೋಷಣ ಅಭಿಯಾನ ಯೋಜನೆಯನ್ನು ಮೊದಲ ಹಂತದಲ್ಲಿ 315 ಜಿಲ್ಲೆಗಳಲ್ಲಿ ಹಾಗೂ ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಒಳಗೊಂಡಂತೆ 235 ಜಿಲ್ಲೆಗಳಲ್ಲಿ ಜನವರಿ 2020 ರಿಂದ ಅನುಷ್ಠಾನಗೊಳಿಸಲಾಗಿದೆ ಎಂದರು. ಪೋಷಣ ಅಭಿಯಾನ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಮೇಲ್ವಿಚಾರಕಿಯರಿಗೆ , ಅಂಗನವಾಡಿ ಕೇಂದ್ರಗಳಲ್ಲಿ ನಡೆಯುವ ದಿನ ನಿತ್ಯದ ಚಟುವಟಿಕೆಗಳನ್ನು ಆನ್ ಲೈನ್ ಮೂಲಕ ಸಲ್ಲಿಸಲು ಸ್ಮಾರ್ಟ್ ಫೋನ್ ಬಹಳ ಅತ್ಯಗತ್ಯವಾಗಿದೆ. ಪೋಷಣ ಯೋಜನೆಯಡಿ ಸ್ಮಾರ್ಟ್ ಫೋನ್‍ಗಳನ್ನು ನೀಡಿರುವುದು ಸಂತೋಷಕರವಾದ ವಿಷಯ ಇದನ್ನು ದೈನಂದಿನ ಕಛೇರಿ ಕೆಲಸಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

Also Read  ಸಿಪಿ ಯೋಗೇಶ್ವರ್ ಗೆ ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ನೀಡುವಂತೆ ಹೈಕಮಾಂಡ್ ಮನವಿ   ವಿರೋಧ ಪಕ್ಷದ ನಾಯಕ ಆರ್. ಅಶೋಕ್

 

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಬಂಟ್ವಾಳ ತಾಲೂಕಿನ ಪುದು ಗ್ರಾಮದಲ್ಲಿ 2018ನೇ ಜನವರಿ ತಿಂಗಳಿನಲ್ಲಿ  ನದಿಯಲ್ಲಿ ಕಾಲು ಜಾರಿ ಮೃತಪಟ್ಟ ಒಂದೇ ಕುಟುಂಬದ ಇಬ್ಬರು ಮಕ್ಕಳ ಪೋಷಕರಿಗೆ ರೂ. 1 ಲಕ್ಷದ ಚೆಕ್ ವಿತರಣೆ ಮಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಎ ಕೋಟ್ಯಾನ್, ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಾಪ ಬೋವಿ, ಜಿಲ್ಲಾ ನಿರೂಪಣಾಧಿಕಾರಿ ಶ್ಯಾಮಲಾ ಮತ್ತಿತರರು ಉಪಸ್ಥಿತರಿದ್ದರು.

Also Read  ಕಡಬ: ಜ್ಯೂಸ್ ಕುಡಿಯಲು ಬಂದಿದ್ದ ಬಾಲಕಿಯ ಫೋಟೋ ತೆಗೆದು ಸ್ಟೇಟಸ್ ಹಾಕಿದ ಆರೋಪ ➤ ಅಂಗಡಿ ಬಳಿ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು

error: Content is protected !!
Scroll to Top