ಮಂಗಳೂರು: ಶಕ್ತಿ ವಸತಿ ಶಾಲೆಯಲ್ಲಿ 6 – 9ನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆ ಪುನರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.01. ಸರಕಾರದ ಆದೇಶದಂತೆ 2021ರ ಹೊಸ ವರುಷದ ಮೊದಲ ದಿನವೇ ಶಕ್ತಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಶಾಲೆಯನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ದಿನದ ಸಮಸ್ಯೆಯಿಂದ ಶಾಲೆಯಲ್ಲಿ ಶಿಕ್ಷಣದ ಸೌಲಭ್ಯದಿಂದ ವಂಚಿತರಾಗಿರುವ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಿಕ್ಷಕರು ಮತ್ತು ಪೋಷಕರ ಅಭಿಪ್ರಾಯದ ಹಿನ್ನಲೆಯಲ್ಲಿ ಸರಕಾರವು ವಿದ್ಯಾಗಮ ಕಾರ್ಯಕ್ರಮಕ್ಕೆ ಒಪ್ಪಿಗೆಯನ್ನುಸೂಚಿಸಿತು. ಅದೇ ಪ್ರಕಾರವಾಗಿ ರಾಜ್ಯದಾದ್ಯಂತ ಎಲ್ಲಾ ಶಾಲೆಗಳು ಇಂದೇ ಶಾಲಾ ಪುನರಾರಂಭಕ್ಕೆ ನಿರ್ಧರಿಸಿತ್ತು. ಈ ನಿಟ್ಟಿನಲ್ಲಿ ಶಕ್ತಿ ವಿದ್ಯಾಸಂಸ್ಥೆಯು ಈ ವಿದ್ಯಾಗಮ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಲು ವಿಶೇಷ ಸಿದ್ಧತೆಗಳೊಂದಿಗೆ ತಯಾರಾಗಿತ್ತು. ಶಾಲಾ ಆವರಣವನ್ನು ಗುರುಕುಲ ಮಾದರಿಯಲ್ಲಿ ಸಿದ್ಧಗೊಳಿಸಿತ್ತು. ಸಂಸ್ಥೆಯ ಆಡಳಿತಾಧಿಕಾರಿಯಾದ ಡಾ. ಕೆ. ಸಿ. ನಾಯಕ್ ದೀಪ ಬೆಳಗಿಸಿದರು ನಂತರ ಸರಸ್ವತಿ ವಂದನೆ, ಓಂಕಾರ ಮಂತ್ರ, ಶ್ಲೋಕ ಹಾಗೂ ವಂದೇ ಮಾತರಂ ಹಾಡಿನ ಮೂಲಕ ಸಾಮಾಜಿಕ ಅಂತರದೊಂದಿಗೆ ಶಾಲಾ ಸಭೆಯನ್ನು ಏರ್ಪಡಿಸಲಾಯಿತು.

ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ. ಸಿ. ನಾಯಕ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಶಿಕ್ಷಣ ಎಂದರೆ ಕೇವಲ ಜ್ಞಾನಾರ್ಜನೆ ಅಲ್ಲ, ವಿದ್ಯಾರ್ಥಿಗಳಿಗೆ ತಮ್ಮ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸಲು ಮಾನಸಿಕ ಹಾಗೂ ದೈಹಿಕ ಸಿದ್ಧತೆಯನ್ನು ಮಾಡುವುದು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಜವಾಬ್ದಾರಿಯನ್ನು ನಿಭಾಯಿಸುವ ಧೈರ್ಯ, ಸಾಮರ್ಥ್ಯವನ್ನು ಹೊಂದಬೇಕು. ಹೊಸ ವರುಷವು ಎಲ್ಲರಿಗೂ ಉತ್ತಮ ಆರೋಗ್ಯ, ಯಶಸ್ಸು, ಗುರಿ ಸಾಧನೆಯ ಮನೋಭಾವನೆ ಹಾಗೂ ಹೊಸತನವನ್ನು ಮೂಡಿಸಲಿ ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ವರುಷದ ಶುಭಾಶಯ ಕೋರಿದರು. ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ವಿದ್ಯಾ ಕಾಮತ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸುಮಾರು ಹತ್ತು ತಿಂಗಳುಗಳಿಂದ ಮೌನವಾಗಿದ್ದ ಶಾಲೆಯಲ್ಲಿ ಇಂದು ಸಂಭ್ರಮ ಮನೆ ಮಾಡಿದೆ. ಸರಕಾರ, ಶಾಲೆ ಹಾಗೂ ಶಿಕ್ಷಕರು ಮತ್ತೊಮ್ಮೆ ನಿಮ್ಮನ್ನು ಶಾಲೆಯ ವಾತಾವರಣಕ್ಕೆ ಕರೆ ತರಲು ಮುಂದಾಗಿದ್ದಾರೆ ಹಾಗೂ ವಿದ್ಯಾರ್ಥಿಗಳೂ ನಿಧಾನವಾಗಿ ದೈಹಿಕ ಹಾಗೂ ಮಾನಸಿಕ ಸಿದ್ಧತೆಗಳೊಂದಿಗೆ ನಿತ್ಯವೂ ಶಾಲೆಗೆ ಬರಲು ಉತ್ಸುಕರಾಗಬೇಕು. ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಚಿಸಲ್ಪಟ್ಟ ನಿಯಾಮಾವಳಿಗಳನ್ನು ಪಾಲಿಸಬೇಕೆಂದೂ, ಯಾವುದೇ ಅನಾರೋಗ್ಯದ ಸೂಚನೆಗಳು ಕಂಡು ಬಂದಲ್ಲಿ ಶಿಕ್ಷಕರ ಗಮನಕ್ಕೆ ತರಬೇಕೆಂದು ತಿಳಿಸಿದರು.

Also Read  ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನೇ ಬಿಡದ ಬೀದಿನಾಯಿಗಳು ► ಬೀದಿನಾಯಿಗಳ ಹಾವಳಿಯಿಂದ ಬೈಕ್ ಪಲ್ಟಿ

ವಿದ್ಯಾಗಮ ನಿಯಮದಂತೆ ಪೋಷಕರ ಒಪ್ಪಿಗೆಯ ಮೇರೆಗೆ ವಿದ್ಯಾರ್ಥಿಗಳಿಗೆ ಅರ್ಧ ದಿನದ ತರಗತಿಗಳನ್ನು ಪ್ರಾರಂಭಿಸಲಾಗಿದೆ. ಕೋವಿಡ್ 19ರ ಮಾರ್ಗಸೂಚಿಗಳು, ಥರ್ಮಲ್ ಸ್ಕ್ಯಾನಿಂಗ್, ಮಾಸ್ಕ್ ಧರಿಸುವುದು, ಆಗಾಗ ಕೈಗಳ ಸ್ವಚತೆಗಳ ಬಗ್ಗೆ ಅರಿವು ಮೂಡಿಸಲಾಯಿತು. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಾಲೆಯು ಆರೋಗ್ಯ ಮತ್ತು ಭವಿಷ್ಯದ ದೃಷ್ಟಿಯಿಂದ ಸುರಕ್ಷಿತ ಎನ್ನುವುದನ್ನು ಮನದಟ್ಟು ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಶಾಲಾ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಸುಧೀರ್ ಎಮ್. ಕೆ, ಶಕ್ತಿ ಪೂರ್ವ ಶಾಲೆಯ ಸಹ ಸಂಯೋಜಕಿ ನೀಮಾ ಸಕ್ಸೇನಾ ಹಾಗೂ ಸಂಸ್ಥೆಯ ಎಲ್ಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಶಾಲಾ ಪುನರಾರಂಭದ ಸಂಭ್ರಮಕ್ಕೆ ಪ್ರತ್ಯಕ್ಷ ಸಾಕ್ಷಿಗಳಾದರು.

Also Read  ರಾಷ್ಟ್ರ ಮಟ್ಟದ ಶೌರ್ಯ ಪ್ರಶಸ್ತಿ - ಅರ್ಜಿ ಆಹ್ವಾನ

 

error: Content is protected !!
Scroll to Top