ಖರೀದಿಸಿದ ಎರಡೇ ತಿಂಗಳಲ್ಲಿ ಕೆಟ್ಟು ಹೋದ ಮಗನ ಹೊಸ ಬೈಕ್ ► ಶೋ ರೂಮ್ ಮುಂದೆ ವಿಷ ಕುಡಿದ ತಾಯಿ..!!!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ.12. ಎರಡು ತಿಂಗಳ ಹಿಂದೆಯಷ್ಟೇ ಖರೀದಿಸಿದ ಮಗನ ಹೊಸ ಬೈಕನ್ನು ಎಕ್ಸ್ ಚೇಂಜ್ ಮಾಡಿಕೊಡಲು ಶೋ ರೂಮ್ ಸಿಬ್ಬಂದಿ ನಿರಾಕರಿಸಿದ್ದಕ್ಕಾಗಿ ಮನನೊಂದ ತಾಯಿಯು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಕಸ್ತೂರ್ ಬಾ ರಸ್ತೆಯ ಖಿವ್ ರಾಜ್ ಮೋಟರ್ಸ್ ಶೋ ರೂಮಿನಲ್ಲಿ ನಡೆದಿದೆ.

ಸರೋಜಮ್ಮ ಆತ್ಮಹತ್ಯೆಗೆ ಯತ್ನಿಸಿದ ತಾಯಿ. ಸರೋಜಮ್ಮರ ಮಗ ಶ್ರೀಪಾದ ರಾಘವ್ ಎರಡು ತಿಂಗಳ ಹಿಂದೆ ಕಸ್ತೂರ್ ಬಾ ರಸ್ತೆಯ ಖಿವ್ ರಾಜ್ ಮೋಟರ್ಸ್ ಶೋ ರೂಮಿನಿಂದ ಡೋಮಿನರ್ 400 ಸಿಸಿ ಬೈಕ್ ಖರೀದಿಸಿದ್ದರು. ಆದರೆ ಹೊಸ ಬೈಕ್ ಎರಡೇ ತಿಂಗಳಲ್ಲಿ ಕೆಟ್ಟು ಹೋಗಿತ್ತು.

ಹೊಸ ಬೈಕ್ ಕೆಟ್ಟು ಹೋದ ಕಾರಣ ಬೈಕ್ ಎಕ್ಸ್ ಚೇಂಜ್ ಮಾಡಿಕೊಡುವಂತೆ ಶ್ರೀಪಾದ ರಾಘವ ಅವರು ಶೋ ರೂಂ ನಲ್ಲಿ ಮನವಿ ಮಾಡಿಕೊಂಡಿದ್ದರು. ಆದರೆ ಶೋ ರೂಮ್ ಸಿಬ್ಬಂದಿ ಬೈಕ್ ಎಕ್ಸ್ ಚೇಂಜ್ ಮಾಡಿಕೊಡಲು ನಿರಾಕರಿಸಿದ್ದು, ಇದರಿಂದ ಮನನೊಂದ ಸರೋಜಮ್ಮ ಶೋ ರೂಮ್ ಗೆ ಬಂದು ವಿಷ ಸೇವಿಸಿದ್ದಾರೆ.

ಕೂಡಲೆ ಸರೋಜಮ್ಮ ಅವರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸರೋಜಮ್ಮ ಸ್ಥಿತಿ ಗಂಭೀರವಾಗಿದ್ದು, ಇನ್ನೂ ಹತ್ತು ದಿನ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Scroll to Top