ಕ್ರಿಸ್ಮಸ್ ಹಾಗೂ ಹೊಸ ವರ್ಷ ಸರಳ ಸಂಭ್ರಮಾಚರಣೆ ➤ ಜಿಲ್ಲಾಧಿಕಾರಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 23. ಕೋವಿಡ್-19 ಸಾಂಕ್ರಾಮಿಕ ಸೋಂಕನ್ನು ನಿಯಂತ್ರಿಸಲು ಸರಕಾರವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಕೋವಿಡ್-19 ಸೋಂಕಿನ ಎರಡನೇ ಅಲೆ ಹರಡುವಿಕೆಯನ್ನು ನಿಯಂತ್ರಿಸಲು ಇನ್ನೂ ಹೆಚ್ಚು ಕಟ್ಟುನಿಟ್ಟಾಗಿ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಇರುವ ಹಿನ್ನೆಲೆ  ಕ್ರಿಸ್ಮಸ್ ಹಾಗೂ 2021ರ ಹೊಸ ವರ್ಷ ಸಂಭ್ರಮಾಚರಣೆಯನ್ನು ಸರಳವಾಗಿ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಅನುಸರಿಸಿ ಆಚರಿಸಬೇಕು. ಅದರಂತೆ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 26(1)(2)(3) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷನಾಗಿ ಮತ್ತು ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ 2020 ಕಲಂ 4ರಲ್ಲಿ ಪ್ರದತ್ತವಾದ ಅಧಿಕಾರದಂತೆ ದ.ಕ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

ಕ್ರೈಸ್ತ ಧರ್ಮದ ಚರ್ಚ್ ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಚರ್ಚಿನ ಮೇಲ್ವಿಚಾರಕರು/ ಕಾರ್ಯಕ್ರಮ ಆಯೋಜಕರು ಕಟ್ಟುನಿಟ್ಟಾಗಿ ಕ್ರಮ ವಹಿಸಬೇಕು. ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ತಡೆಗಟ್ಟಲು ಸಾರ್ವಜನಿಕರ ಹಸ್ತಲಾಘವ ಹಾಗೂ ಆಲಿಂಗನವನ್ನು ನಿಷೇಧಿಸಲಾಗಿದೆ. ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ಕ್ಲಬ್/ ಪಬ್/ ರೆಸ್ಟೋರೆಂಟ್ ಹಾಗೂ ಅದೇ ತೆರನಾದ ಸ್ಥಳ/ ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೇ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ ವಿಶೇಷ ಡಿ.ಜೆ ಡ್ಯಾನ್ಸ್ ಕಾರ್ಯಕ್ರಮಗಳನ್ನು , ವಿಶೇಷ ಪಾರ್ಟಿ, ಇತ್ಯಾದಿಗಳನ್ನು ನಿಷೇಧಿಸಿದೆ. ಆದರೆ ಕ್ಲಬ್/ ಪಬ್ ರೆಸ್ಟೋರೆಂಟ್ ಗಳ ದೈನಂದಿನ ವ್ಯವಹಾರ ನಡೆಸಲು ನಿರ್ಬಂಧವಿರುವುದಿಲ್ಲ.
ಹೊಸ ವರ್ಷಾಚರಣೆ ಸಂಬಂಧದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮುಖ್ಯ ಸ್ಥಳಗಳಲ್ಲಿ ಹಾಗೂ ಮುಖ್ಯ ರಸ್ತೆಗಳಲ್ಲಿ ಮತ್ತು ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆಯನ್ನು ನಿಷೇಧಿಸಿದೆ. ಆದರೆ, ಈ ಸ್ಥಳಗಳಲ್ಲಿ ಪ್ರತಿನಿತ್ಯದ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಬಂಧವಿರುವುದಿಲ್ಲ. ಆಯಾ ರಸ್ತೆ ಸ್ಥಳಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುವುದು.

Also Read  ಪುತ್ತೂರು: ಬಿಜೆಪಿ ನಾಯಕರ ಫೋಟೋಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ➤ ಚಪ್ಪಲಿ ಹಾರ ಹಾಕಿ ಬ್ಯಾನರ್ ಅಳವಡಿಕೆ

65 ವರ್ಷದ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಹೋಟೆಲ್ ಗಳು/ ಮಾಲ್ ಗಳು/ ಪಬ್/ ರೆಸ್ಟೋರೆಂಟ್ ಗಳು ಹಾಗೂ ಅಂತಹ ಪ್ರದೇಶಗಳಲ್ಲಿ ಥರ್ಮಾಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಿಸಲು ಮಾಲಿಕರು ಕಡ್ಡಾಯವಾಗಿ ವ್ಯವಸ್ಥೆ ಮಾಡಿರಬೇಕು. ಹೋಟೆಲ್‍ಗಳು/ ಮಾಲ್‍ಗಳು/ ಪಬ್‍ಗಳು/ ರೆಸ್ಟೋರೆಂಟ್‍ಗಳಲ್ಲಿ ಅದರ ಮಾಲೀಕರು ಕಡ್ಡಾಯವಾಗಿ ಸರ್ಕಾರದ ಆದೇಶದಂತೆ ಕೋವಿಡ್-19ರ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರದಿಂದ ಜನರು ಸೇರಲು ಜಾಗ್ರತೆ ವಹಿಸಬೇಕು. ಅಗತ್ಯವಿದ್ದಲ್ಲಿ ಜನರನ್ನು ಸರದಿಯಲ್ಲಿ ಪ್ರವೇಶಿಸಲು ಅಥವಾ ಆನ್ ಲೈನ್ ಮುಖಾಂತರ ಅಥವಾ ಟೋಕನ್ ಪದ್ದತಿಯಲ್ಲಿ ಸ್ಥಳ ಕಾಯ್ದಿರಿಸಲು ವ್ಯವಸ್ಥೆ ಕಲ್ಪಿಸಬೇಕು. ಪ್ರಾಂಗಣಗಳಲ್ಲಿ ಉಪಹಾರ ಸ್ಥಳಗಳಲ್ಲಿ ವ್ಯವಸ್ಥಿತ ಕಟ್ಟಡ ಸಮುಚ್ಚಯಗಳಲ್ಲಿ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ಸಂಭ್ರಮಾಚರಣೆ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಸಾರ್ವಜನಿಕರ ಆರೋಗ್ಯದ ದೃಷ್ಠ್ಠಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಹಾಗೂ ಇತರ ಇಲಾಖೆ/ ಪಾಲಿಕೆ/ ಪ್ರಾಧಿಕಾರಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು.  ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ/ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188ರ ಅಡಿಯಲ್ಲಿ ಶಿಸ್ತಿನ/ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ಉಡಾವಣೆಗೆ ಸಿದ್ಧವಾದ ವಿಶ್ವದ ಅತಿ ದೊಡ್ಡ ಖಾಸಗಿ ಉಪಗ್ರಹ ಜುಪಿಟರ್-3

error: Content is protected !!
Scroll to Top