(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22. ಬ್ರಿಟನ್ ನಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಅಬ್ಬರಿಸುತ್ತಿದ್ದು, ಈ ನಡುವೆ ಬ್ರಿಟನ್‌ನಿಂದ ಮಂಗಳೂರಿಗೆ 56 ಮಂದಿ ಆಗಮಿಸಿರುವುದು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಬ್ರಿಟನ್ ಸೇರಿದಂತೆ ಹಲವು ದೇಶಗಳಿಂದ ಭಾರತೀಯರು ತಾಯ್ನಾಡಿಗೆ ವಾಪಸಾಗುತ್ತಿದ್ದು, 56 ಮಂದಿ ಮಂಗಳೂರಿಗೆ ಬಂದಿದ್ದಾರೆ. ಇವರೆಲ್ಲರೂ ತಾವು ವಾಸಿಸುತ್ತಿದ್ದ ದೇಶದಲ್ಲೇ ಕೊರೋನಾ ಪರೀಕ್ಷೆ ನಡೆಸಿ ಕೋವಿಡ್ ನೆಗೆಟಿವ್ ದೃಢೀಕರಣದೊಂದಿಗೆ ಆಗಮಿಸಿದ್ದು, ಬ್ರಿಟನ್ ನಲ್ಲಿ ಕೊರೋನಾ ಆರ್ಭಟ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲರನ್ನೂ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಲಾಗುವುದು. ಇದಕ್ಕಾಗಿ ಮೂವರು ಅಧಿಕಾರಿಗಳ ವಿಶೇಷ ತಂಡಗಳನ್ನು ರಚಿಸಲಾಗಿದೆ. ತಾಯ್ನಾಡಿಗೆ ವಾಪಸಾಗುವ ಎಲ್ಲ ಪ್ರಯಾಣಿಕರಿಗೆ 14 ದಿನಗಳ ಕ್ವಾರಂಟೈನ್ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಜಿಲ್ಲೆಯ ಜನತೆ ಯಾವುದೇ ರೀತಿಯಲ್ಲಿ ಭಯ ಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.