(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.22. ಸೂಕ್ತ ದಾಖಲೆಗಳಿಲ್ಲದೆ ಮಂಜೇಶ್ವರ ಸರಹದ್ದಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟನ್ನು ವಶಕ್ಕೆ ಪಡೆದ ಕೇರಳದ ಇಬ್ಬರು ಪೊಲೀಸರನ್ನೇ ಮಂಗಳೂರಿನ ಮೀನುಗಾರರ ತಂಡವೊಂದು ಅಪಹರಿಸಿದ ಘಟನೆ ಸೋಮವಾರದಂದು ಮಂಗಳೂರಿನಲ್ಲಿ ನಡೆದಿದೆ.
ಕುಂಬಳೆಯ ಕರಾವಳಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ವಿ. ರಾಜೀವ್ ಕುಮಾರ್ ನೇತೃತ್ವದ ತಂಡವು ಸೋಮವಾರ ತಪಾಸಣೆ ನಡೆಸುತ್ತಿದ್ದ ಸಂದರ್ಭ ಮಂಜೇಶ್ವರ ಸಮುದ್ರದಲ್ಲಿ ಕರ್ನಾಟಕ ನೋಂದಣಿಯ ಬೋಟ್ ಕಂಡುಬಂದಿದ್ದು, ಈ ವೇಳೆ ಅದರ ದಾಖಲೆಗಳನ್ನು ಪರಿಶೀಲಿಸಿದಾಗ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಬೋಟ್‌ನ್ನು ವಶಕ್ಕೆ ಪಡೆದು ಮಂಜೇಶ್ವರ ಬಂದರಿಗೆ ತಲುಪಿಸಲು ಸೂಚಿಸಿದ್ದಾರೆ. ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಬೋಟ್ ಗೆ ಹತ್ತಿಸಿ ಸಬ್‌ಇನ್‌ಸ್ಪೆಕ್ಟರ್ ರಾಜೀವ್ ಕುಮಾರ್ ಹಾಗೂ ಇತರ ಪೊಲೀಸರು ಅಲ್ಲಿಂದ ಮಂಜೇಶ್ವರ ಬಂದರಿಗೆ ತೆರಳಿದ್ದಾರೆ. ಗಂಟೆಗಳು ಕಾದರೂ ಬೋಟ್ ಬಾರದ ಹಿನ್ನೆಲೆಯಲ್ಲಿ ಬೋಟ್ ನಲ್ಲಿದ್ದ ಪೊಲೀಸರಿಗೆ ಕರೆಮಾಡಿದಾಗ ಬೋಟ್ ಮಂಜೇಶ್ವರ ಬಂದರ್‌ಗೆ ಬಾರದೆ, ಮಂಗಳೂರು ಕಡೆಗೆ ವೇಗವಾಗಿ ತೆರಳುತ್ತಿರುವ ಬಗ್ಗೆ ತಿಳಿದುಬಂದಿದೆ. ಕೂಡಲೇ ಕಾಸರಗೋಡಿನ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರು ಪೊಲೀಸರನ್ನು ಸಂಪರ್ಕಿಸಿ ವಿಚಾರ ತಿಳಿಸಿದ್ದು, ಅಷ್ಟರಲ್ಲಿ ಬೋಟ್ ಮಂಗಳೂರು ಬಂದರು ತಲುಪಿತ್ತೆನ್ನಲಾಗಿದೆ. ಪೊಲೀಸರನ್ನು ಅಪಹರಿಸಿದ ಆರೋಪದಲ್ಲಿ ಬೋಟ್‌ನಲ್ಲಿದ್ದವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.