ಉಪ್ಪಿನಂಗಡಿ, ಡಿ.18. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆ ಬಯಸಿ ನಾನು ಸಲ್ಲಿಸಿದ ನಾಮಪತ್ರವನ್ನು ಹಿಂಪಡೆಯಬೇಕೆಂದು ಬಿಜೆಪಿ ಬೆಂಬಲಿಗರು ನನಗೆ ಬೆದರಿಕೆ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಆದ್ದರಿಂದ ನನಗೆ ರಕ್ಷಣೆ ನೀಡಿ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡಬೇಕೆಂದು ಅನುಸೂಚಿತ ಪಂಗಡದ ಮಹಿಳೆಯೋರ್ವರು 34 ನೆಕ್ಕಿಲಾಡಿಯ ಸಹಾಯಕ ಚುನಾವಣಾಧಿಕಾರಿಗೆ ಮನವಿ ಮಾಡಿದ ಘಟನೆ ಶುಕ್ರವಾರ ನಡೆದಿದೆ.
ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾಮದ ಸಾಂತ್ಯಡ್ಕ ನಿವಾಸಿ ಕುಶಾಲಪ್ಪ ಎಂಬವರ ಪತ್ನಿ ಶಶಿಪ್ರಭಾ ಎಂಬವರು ಈ ದೂರು ನೀಡಿದ್ದು, ಪುತ್ತೂರು ತಾಲೂಕಿನ 34 ನೆಕ್ಕಿಲಾಡಿ ಗ್ರಾ.ಪಂ. ಪಂಚಾಯತ್ ನ 1ನೇ ಕ್ಷೇತ್ರ ಹಾಗೂ 3ನೇ ಕ್ಷೇತ್ರದಲ್ಲಿ ಅನುಸೂಚಿತ ಪಂಗಡದ ಕೆಟಗರಿಯಲ್ಲಿ ನಾನು ಗ್ರಾ.ಪಂ. ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಆದರೆ ನಿನ್ನೆಯಿಂದ ನನಗೆ ಬಿಜೆಪಿ ಬೆಂಬಲಿಗರು ನಾಮಪತ್ರ ಹಿಂಪಡೆಯಬೇಕೆಂದು ಬೆದರಿಕೆಯೊಡ್ಡುತ್ತಿದ್ದು, ನನ್ನ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಪ್ರಜಾಪ್ರಭುತ್ವದ ಅಡಿಯಲ್ಲಿ ತನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವು ಮಾಡಿಕೊಡಬೇಕು ಹಾಗೂ ಸೂಕ್ತ ರಕ್ಷಣೆಯನ್ನು ನೀಡಬೇಕೆಂದು ಅವರು ವಿನಂತಿಸಿದ್ದಾರೆ. 34 ನೆಕ್ಕಿಲಾಡಿ ಗ್ರಾ.ಪಂ.ನ ಸಹಾಯಕ ಚುನಾವಣಾಧಿಕಾರಿ, ಪಿಡಿಒ ಜಯಪ್ರಕಾಶ್ ಅವರು ದೂರು ಸ್ವೀಕರಿಸಿದ್ದಾರೆ.