ಕುಕ್ಕೆ ಸುಬ್ರಹ್ಮಣ್ಯ :ಈ ಬಾರಿ ಕುಕ್ಕೆ ಸುಬ್ರಹ್ಮಣ್ಯನ ಬ್ರಹ್ಮರಥ ಎಳೆಯಲು ಭಕ್ತರಿಗಿಲ್ಲ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ರಾಜ್ಯದ ಶ್ರೀಮಂತ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಈ ಬಾರಿ ರಥೋತ್ಸವದಲ್ಲಿ ಭಕ್ತರ ಪಾಲ್ಗೊಳ್ಳುವಿಕೆಗೆ ನಿಷೇಧ ಹೇರಲಾಗಿದೆ. ಪ್ರತೀ ವರ್ಷ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯುತ್ತಿದ್ದು, ಈ ರಥೋತ್ಸವದಲ್ಲಿ ರಥ ಎಳೆಯಲು ಭಕ್ತರಿಗೂ ಅವಕಾಶವನ್ನು ಕಲ್ಪಿಸಲಾಗುತ್ತಿತ್ತು. ಆದರೆ, ಈ ಬಾರಿ ಕೋವಿಡ್-19 ಹಿನ್ನಲೆಯಲ್ಲಿ ಭಕ್ತರಿಗೆ ರಥ ಎಳೆಯುವ ಅವಕಾಶವನ್ನು ನಿರಾಕರಿಸಲಾಗಿದೆ. ಕ್ಷೇತ್ರದ ಸಂಪ್ರದಾಯಕ್ಕೆ ಯಾವುದೇ ರೀತಿಯ ಧಕ್ಕೆ ಬಾರದ ರೀತಿಯಲ್ಲಿ ಈ ಬಾರಿ ಚಂಪಾಷಷ್ಠಿ ಮಹೋತ್ಸವ ನಡೆಸಲು ಸರಕಾರ ತೀರ್ಮಾನಿಸಿದೆ.

ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಧಿಪತಿ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವಕ್ಕೂ ಕೊರೊನಾ ಕರಿಛಾಯೆ ಆವರಿಸಿದೆ. ಪ್ರತೀ ಚಂಪಾಷಷ್ಠಿಯಂದು ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವದ ಜೊತೆಗೆ ಶಿವ-ಪಾರ್ವತಿಯರ ರಥೋತ್ಸವ ನಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ.ಈ ಧಾರ್ಮಿಕ ವಿಧಿ ವಿಧಾನದಲ್ಲಿ ಭಕ್ತರನ್ನೂ ಸೇರಿಸಿಕೊಳ್ಳುವ ಪದ್ಧತಿ ಕ್ಷೇತ್ರದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿತ್ತು. ಬ್ರಹ್ಮರಥ ಎಳೆಯುವುದು ಪುಣ್ಯದ ಕೆಲಸ ಎನ್ನುವ ನಂಬಿಕೆ ಕ್ಷೇತ್ರದಲ್ಲಿದ್ದು, ಈ ಕಾರಣಕ್ಕಾಗಿಯೇ ಮುಂಜಾನೆ ನಡೆಯುವ ಈ ರಥೋತ್ಸವದಲ್ಲಿ ರಥ ಎಳೆಯಲು ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಸೇರುತ್ತಾರೆ.ಕೋವಿಡ್ ಹಿನ್ನಲೆಯಲ್ಲಿ ಕ್ಷೇತ್ರದಲ್ಲಿ ಸೇವೆಗಳನ್ನು ಕಡಿತಗೊಳಿಸುವುದಕ್ಕೆ ಭಕ್ತರ ಅಸಮಾಧಾನವಿಲ್ಲದಿದ್ದರೂ, ಬ್ರಹ್ಮರಥದ ಸೇವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿರುವುದು ಭಕ್ತರ ನಿರಾಶೆಗೆ ಕಾರಣವಾಗಿದೆ.

Also Read  ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದು ಇತಿಹಾಸ ಬರೆದ ಅಮನ್ ಸೆಹ್ರಾವತ್..!

error: Content is protected !!
Scroll to Top