(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.07. ವಿಚಾರವಾದಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆಯ ಜೊತೆ ನಂಟು ಹೊಂದಿರುವ ಹಾಗೂ ಈಗ ತಲೆಮರೆಸಿಕೊಂಡಿರುವ ಐದು ಮಂದಿ ಪ್ರಮುಖ ಶಂಕಿತರಾಗಿ ಮೂಡಿಬಂದಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಶಂಕಿತರನ್ನು ಮಂಗಳೂರು ಮೂಲದ ಕಡಬದ ಜಯಪ್ರಕಾಶ್, ಕೊಲ್ಹಾಪುರದ ಪ್ರವೀಣ್ ಲಿಮ್ಕರ್, ಪುಣೆಯ ಸಾರಂಗ್ ಅಕೋಲ್ಕರ್, ಸಾಂಗ್ಲಿಯ ರುದ್ರ ಪಾಟೀಲ್ ಹಾಗು ಸತಾರದ ವಿನಯ್ ಪವಾರ್ ಎಂದು ಹೇಳಲಾಗಿದೆ. ಈ ಪೈಕಿ ನಾಲ್ವರ ವಿರುದ್ಧ ಈಗಾಗಲೇ 2009ರಲ್ಲಿ ಗೋವಾದ ಮಾಲೆಗಾಂವ್ ನಲ್ಲಿ ನಡೆದ ಬಾಂಬ್ ಸ್ಪೋಟದ ಆರೋಪದಲ್ಲಿ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದೆ.
ಇಲೆಕ್ಟ್ರೀಶಿಯನ್ ವೃತ್ತಿಯಲ್ಲಿದ್ದ ಕಡಬದ ನೂಜಿಬಾಳ್ತಿಲದ ಜಯಪ್ರಕಾಶ್ ಸನಾತನ ಸಂಸ್ಥೆಯ ವಾಹನ ಚಾಲಕನಾಗಿ ವೃತ್ತಿಗೆ ಸೇರಿಕೊಂಡು ಅಕ್ಟೋಬರ್ 19, 2009ರ ಮಾಲೆಗಾಂವ್ ಸ್ಪೋಟ ಪ್ರಕರಣದಲ್ಲಿ ಪ್ರಮುಖವಾಗಿ ಶಾಮೀಲಾಗಿದ್ದಾನೆಂದು ಶಂಕಿಸಲಾಗಿದ್ದು, ಈತನ ವಿರುದ್ಧ ಇಂಟರ್ಪೋಲ್ ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದೆ. ಎನ್ಐಎ ತಂಡವು ಈತನ ಮಾಹಿತಿ ಕಲೆಹಾಕುವುದಕ್ಕಾಗಿ 2013ರ ಸೆಪ್ಟೆಂಬರ್ 19 ರಂದು ಕಡಬ ಪೊಲೀಸ್ ಠಾಣೆ, ಕಡಬ ತಹಶೀಲ್ದಾರ್ ಕಛೇರಿ ಸೇರಿದಂತೆ ಆತನ ಕುಟುಂಬಸ್ಥರಲ್ಲಿಗೆ ಭೇಟಿ ನೀಡಿತ್ತು.
ಕರ್ನಾಟಕ ಎಸ್ಐಟಿ ತಂಡವು ತಲೆಮರೆಸಿಕೊಂಡಿರುವ ಸನಾತನ ಸಂಸ್ಥೆಯವರನ್ನು ಪತ್ತೆ ಹಚ್ಚಿದರೆ ಗೌರಿ ಹತ್ಯೆಯ ನಿಗೂಢತೆ ಬಯಲಾಗುತ್ತದೆ ಎಂದು ತಜ್ಞರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.