(ನ್ಯೂಸ್ ಕಡಬ) newskadaba.com ಉಡುಪಿ ನ. 27: ಮಧ್ಯಪ್ರದೇಶದ ಭೋಪಾಲ ಮಾದರಿಯಲ್ಲಿ ಖಾಸಗಿ ಸಾರ್ವಜನಿಕ ಸಹಭಾಗಿತ್ವದ(ಪಿಪಿಪಿ ಮಾಡೆಲ್) ಸ್ಮಾರ್ಟ್ ಸಿಟಿ ಯೋಜನೆ ಮಣಿಪಾಲ, ಉಡುಪಿ, ಮಲ್ಪೆಯಲ್ಲಿ ಜಾರಿ ಪ್ರಸ್ತಾಪವನ್ನು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ನಗರಸಭೆ ಸಾಮಾನ್ಯ ಸಭೆಯ ಮುಂದಿಡಲಾಯಿತು.
ನಗರಸಭೆಗೆ ಯಾವುದೇ ಖರ್ಚಿಲ್ಲದೆ ಸೇವಾ ಶುಲ್ಕ, ಜಾಹೀರಾತು ಆದಾಯ ತರುವ ಯೋಜನೆಗೆ 130 ಕೋಟಿ ರೂ. ವೆಚ್ಚವಾಗಲಿದ್ದು, ಡಿಪಿಆರ್ ಸಿದ್ಧವಾಗಿದೆ. ನಗರಸಭೆ ನಿರ್ಣಯವನ್ನು ಸರಕಾರಕ್ಕೆ ಕಳುಹಿಸಿ ಅಂಗೀಕಾರ ಬಳಿಕ ಗ್ಲೋಬಲ್ ಟೆಂಡರ್ ಕರೆಯಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದರು. 3,000 ಸ್ಮಾರ್ಟ್ ಫೋನ್, ಡ್ರೋನ್ ಚಾರ್ಜಿಂಗ್, ಮನೆಯಿಂದ ಹೊರಡುವ ಮೊದಲೇ ಪಾರ್ಕಿಂಗ್ ಸ್ಲಾಟ್ ಬುಕ್ಕಿಂಗ್, ಟ್ರಾಫಿಕ್ ನಿಯಮ ಉಲ್ಲಂಘನೆಗೆ ಡಿಜಿಟಲ್ ದಂಡ, ಕಳ್ಳರ ಸುಲಭ ಪತ್ತೆ, 5ಜಿ ಕನೆಕ್ಷನ್, ಪರಿಸರ ಸೆನ್ಸಾರ್, ಅಟೋ/ಸೈಕಲ್/ಬೈಕ್/ಬಸ್ ಬೇ ಸಹಿತ ಕಮಾಂಡ್ ಸೆಂಟರ್ ಕುರಿತು ಸ್ಮಾರ್ಟ್ ಸಿಟಿ ನೀಲ ನಕಾಶೆ ತಯಾರಿಸಿದ ಬೆಂಗಳೂರಿನ ಖಾಸಗಿ ಸಂಸ್ಥೆಯ ಗುರುರಾಜ್ ಮಾಹಿತಿ ನೀಡಿದರು.
ಒಳಚರಂಡಿ ಹಳೆ ವ್ಯವಸ್ಥೆ ಬದಲಾವಣೆಗೆ 80ರಿಂದ 90 ಕೋಟಿ ರೂ. ಅಗತ್ಯವಿದ್ದು, ಮುಖ್ಯಮಂತ್ರಿ ಬಳಿ ನಿಯೋಗದಲ್ಲಿ ತೆರಳಿ ವಿಶೇಷ ಅನುದಾನ ಒದಗಿಸಲು ಮನವಿ ಮಾಡೋಣ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದರು