✍? ವಿಜಯ್ ಕಡಬ
ಕಡಬ: ಪಶ್ವಿಮ ವಲಯ ಅಂದರೆ ನಾಲ್ಕು ಜಿಲ್ಲೆಯಲ್ಲಿ ಕಡಬ ಮಾದರಿ ಠಾಣೆಯಾಗಿ ಈಗಾಗಲೇ ಇಲಾಖೆಯ ಮಟ್ಟದಲ್ಲಿ ಗುರುತಿಸಿಕೊಂಡಿದೆ, ಹೌದು, ಕಡಬ ಪೋಲಿಸ್ ಠಾಣೆಗೆ ತನ್ನದ ಆದ ಇತಿಹಾಸವಿದೆ, ಕೇವಲ ಕಾನೂನು ಭಂಜಕರಿಗೆ ಸಿಂಹ ಸ್ವಪ್ನವಾಗಿರುವುದು ಅಲ್ಲದೆ ಜತೆಗೆ ಕಡಬದ ಜನತೆಯ ಜತೆ ಉತ್ತಮ ಸಂಬಂಧ ಹಾಗೂ ಭರವಸೆಯ ಕೇಂದ್ರವಾಗುವ ಮೂಲಕ ಕಡಬ ಠಾಣೆ ಹೆಚ್ಚು ಗುರುತಿಸಿಕೊಂಡಿದೆ. ಸರಿ ಸುಮಾರು 6 ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಕಡಬ ಠಾಣೆಯಲ್ಲಿ ಇದುವರೆಗೆ 29 ಪೊಲೀಸ್ ಉಪನಿರೀಕ್ಷಕರುಗಳು ಕಾರ್ಯನಿರ್ವಹಿಸಿ, 30ನೇ ಎಸ್.ಐ ಆಗಿ ಕಡಬ ಠಾಣೆಗೆ 2019ನೇ ನವೆಂಬರ್ 21ರಂದು ಆಗಮಿಸಿದ ರುಕ್ಮ ನಾಯ್ಕ್ ಅವರ ಕರ್ತವ್ಯ ನಿರ್ವಹಣೆಗೆ ಇಂದಿಗೆ ಒಂದು ವರ್ಷ ಆಗುತ್ತಿದೆ.
ವಿಶೇಷವೆಂದರೆ ಉಪನಿರೀಕ್ಷಕ ರುಕ್ಮ ನಾಯ್ಕ್ ಅವರ ಉತ್ತಮ ಕಾರ್ಯನಿರ್ವಹಣೆಯಿಂದ ಪಶ್ಚಿಮ ವಲಯದಲ್ಲಿ ಕಡಬ ಠಾಣೆ ಮಾದರಿ ಠಾಣೆಯಾಗಿ ಗುರುತಿಸಿಕೊಳ್ಳುವಂತಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ರಾತ್ರಿ ಹಗಲೆನ್ನದೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಕೀರ್ತಿ ರುಕ್ಮನಾಯ್ಕ್ ಅವರಿಗೆ ಸಲ್ಲುತ್ತದೆ. ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಯಾವುದೇ ಮುಲಾಜಿ ಇಲ್ಲದೆ ಕ್ರಮ ಕೈಗೊಳ್ಳುವ ಜತೆಗೆ ರುಕ್ಮನಾಯ್ಕ್ ಅವರಿಗೆ ಮಾನವಿತೆಯ ವರ್ತನೆಯನ್ನು ಜನ ಗುರುತಿಸಿಕೊಂಡಿದ್ದಾರೆ. ಕೊರೋನಾ ಲಾಕ್ಡೌನ್ ಸಂದರ್ಭ ರುಕ್ಮ ನಾಯ್ಕ್ ಅವರ ಕರ್ತವ್ಯ ನಿರ್ವಹಣೆ ಮಾತ್ರ ಮೆಚ್ಚಲೆಬೇಕು, ಸರಕಾರ ಹೊರಡಿಸಿದ ಕಟ್ಟು ನಿಟ್ಟಿನ ಕಾನೂನುಗಳನ್ನು ಪಾಲನೆ ಮಾಡಿದ್ದರು, ಬೇರೆ ಊರಿನಲ್ಲಿ ಕಡಬದ ಪೋಲಿಸರ ಬಗ್ಗೆ ಮಾತನಾಡುವಷ್ಟರ ಮಟ್ಟಿಗೆ ರುಕ್ಮನಾಯ್ಕ್ ಅವರ ಕಾರ್ಯ ವೈಖರಿ ಇತ್ತು.
ಜನಸ್ನೇಹಿ ಅಧಿಕಾರಿಯಾಗಿರುವ ರುಕ್ಮ ನಾಯ್ಕ್ ಅವರು ಠಾಣಾ ವ್ಯಾಪ್ತಿಯಲ್ಲಿ ಸ್ವತಃ ಅವರೇ ಗಸ್ತು ತಿರುಗುತ್ತಾರೆ, ವಿಶ್ರಾಂತಿ ಕಡಿಮೆ ಕೆಲಸ ಹೆಚ್ಚು ಮಾಡುವ ಇವರು ರಾಮಕುಂಜದ ಪಂಚಾಯತ್, ಅಂಗಡಿ, ಬ್ಯಾಂಕ್, ಶಾಲೆ, ಅಕ್ರಮ ನಾಡ ಪಿಸ್ತೂಲ್ ಪತ್ತೆ ಪ್ರಕರಣ, ಗಾಂಜಾ ಸೇವಣೆ ಪತ್ತೆ, ಅಲ್ಲದೆ ಮಹಿಳೆ, ಯುವತಿಯರ ನಾಪತ್ತೆ ಪ್ರಕರಣಗಳನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ.
12 ಲಕ್ಷ ದಂಡ ವಸೂಲಿ: 19 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ಕಡಬ ಠಾಣೆಯಲ್ಲಿ ಕಳೆದ ಒಂದು ವರ್ಷದಲ್ಲಿ ಕಾನೂನು ಉಲ್ಲಂಘನೆ ಮಾಡುವವರಿಂದ ಸುಮಾರು 12 ಲಕ್ಷ ದಂಡ ವಸೂಲಿ ಮಾಡಲಾಗಿದೆ. ಈಗಾಗಲೇ ಮುಖ್ಯವಾಗಿ ಕಡಬ ಹಾಗೂ ಆಲಂಕಾರುಗಳಲ್ಲಿ ಪಾರ್ಕಿಂಗ್ ಸಮಸ್ಯೆಗಳು ಎದುರಾದಾಗ ಅದನ್ನು ಕಾನೂನು ಮತ್ತು ಸೌಹಾರ್ಧತವಾಗಿ ಅದಕ್ಕೆ ಪರಿಹಾರವನ್ನು ರುಕ್ಮ ನಾಯ್ಕ್ ಅವರ ನೇತೃತ್ವದಲ್ಲಿ ಕಂಡುಕೊಳ್ಳಲಾಗಿದೆ.
ಕಡಬ ಠಾಣೆ ಸ್ವಚ್ಚ ಠಾಣೆ ಮಾಡುವ ಕನಸು: ಕಡಬ ಠಾಣೆಯೂ ಕಡಬದ ಅಧಿದೇವತೆ ಶ್ರೀ ದುರ್ಗಾಂಬಿಕೆಯ ಸಾನಿಧ್ಯ ಎದುರು ಇದ್ದು ಠಾಣೆಗೂ ಸಂಬಂಧ ಕಲ್ಪಿಸಿದೆ, ದೇವಸ್ಥಾನದಲ್ಲಿ ನಡೆಯುವ ಪ್ರಸಿದ್ದ ಏಕಾಹ ಭಜನೆಯನ್ನು ಪ್ರಾರಂಭಿಸಿದವರೇ ಮೊದಲ ಎಸ್.ಐ ದೂಮಣ್ಣ ಅವರು, ಅಂದಿನಿಂದ ಇಂದಿನವರೆಗೆ ದೇವಸ್ಥಾನದಲ್ಲಿ ನಡೆಯುವ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಠಾಣೆಯಿಂದ ಪಾಲ್ಗೋಳ್ಳಲಾಗುತ್ತದೆ. ಅಲ್ಲದೆ ಠಾಣೆಯ ಸಮೀಪದಲ್ಲಿ ನಾಗ ಸಾನಿಧ್ಯವೂ ಇದೆ, ಇಂತಹ ಇತಿಹಾಸ ಇರುವ ಠಾಣೆಯ ಪರಿಸರ ರುಕ್ಮ ನಾಯ್ಕ್ ಅವಧಿಯಲ್ಲಿ ಸುಂದರ, ಸ್ವಚ್ಚಗೊಳ್ಳುತ್ತಿದೆ, ಈಗಾಗಲೇ ಆವರಣ ಗೋಡೆಯ ಕಾಮಗಾರಿಗಳು ನಡೆಯುತ್ತಿದೆ, ಠಾಣೆಗೆ ಗೇಟು, ಶೆಡ್ ನಿರ್ಮಾಣಗಳು ನಡೆಯುತ್ತಿದೆ. ಠಾಣೆಯ ಪರಿಸರವನ್ನು ಅದೆಷ್ಟೋ ಭಾರಿ ಎಸ್.ಐ.ಅವರ ನೇತೃತ್ವದಲ್ಲಿ ಸ್ವಚ್ಚಗೊಳಿಸಲಾಗಿತ್ತು.
ರಾಮಕುಂಜದಲ್ಲಿ ಹೊರ ಠಾಣೆ ಮಾಡುವ ಇಂಗಿತ: ಈಗಾಗಲೇ ಕಡಬ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಸಂಘಸಂಸ್ಥೆಗಳ ನೆರವಿನೊಂದಿಗೆ ಬ್ಯಾರಿಕೆಡ್ ಅಳವಡಿಕೆ ಮಾಡಿರುವ ಇವರು ರಾಮಕುಂಜದಲ್ಲಿ ಹೊರ ಠಾಣೆಯನ್ನು ಪ್ರಾರಂಭಿಸುವ ಬಗ್ಗೆ ಈಗಾಗಲೇ ರುಕ್ಮನಾಯ್ಕ್ ಸ್ಥಳೀಯ ಆಡಳಿತದೊಂದಿಗೆ ಮಾತುಕತೆ ನಡೆಸಿದ್ದಾರೆ. ರಾಮಕುಂಜ, ಆತೂರು ಜಂಕ್ಷನ್, ಕಡಬ ಕಾಲೇಜು ರಸ್ತೆ ಕ್ರಾಸ್ ಭಾಗದಲ್ಲಿ ಸಿಸಿ ಟಿವಿ ಅಳವಡಿಸುವ ಗುರಿಯನ್ನು ರುಕ್ಮ ನಾಯ್ಕ್ ಅವರು ಹೊಂದಿದ್ದಾರೆ.
ಜನಸ್ನೇಹಿ ಅಧಿಕಾರಿ ರುಕ್ಮನಾಯ್ಕ್: ಒಂದೆಡೆ ಕಾನೂನು ಉಲ್ಲಂಘನೆ ಮಾಡುವವರ ವಿರುದ್ದ ಯಾವುದೇ ಒತ್ತಡಗಳು ಬಂದರೂ ಮುಲಾಜಿ ಇಲ್ಲದೆ ಕ್ರಮ ಕೈಗೊಳ್ಳುವ ರುಕ್ಮ ನಾಯ್ಕ್ ಅವರಲ್ಲಿ ಕೆಲವು ಮಾನವೀಯ ಗುಣಗಳು ಅಡಕವಾಗಿದೆ, ಎಲ್ಲರೊಡನೆ ತಾನೊಬ್ಬ ಅಧಿಕಾರಿ ಎಂಬಂತೆ ವರ್ತಿಸಿಕೊಳ್ಳದೆ, ಸಾಮಾನ್ಯ ಜನರನ್ನೂ “ಅಣ್ಣಾ” ಎಂದು ಸಂಬೋದಿಸುತ್ತಿರುವುದನ್ನು ನಾವು ಕಂಡಿದ್ದೇವೆ. ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ಮಂದಿ ಆಹಾರಕ್ಕಾಗಿ ಪರದಾಟ ಮಾಡುತ್ತಿದ್ದಾಗ ಅವರಿಗೆ ತನ್ನ ಸ್ವಂತ ಹಣದಿಂದಲೇ ಸಾಮಾಗ್ರಿಗಳನ್ನು ನೀಡಿದ್ದರು, ಅಲ್ಲದೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ವ್ಯವಸ್ಥೆಗಳನ್ನು ಮಾಡಿದ್ದರು, ಈಗಾಗಲೇ ಅನೇಕ ಸಿವಿಲ್ ವ್ಯಾಜ್ಯಗಳನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಂಡು ಎರಡು ತಂಡಗಳ ಮಧ್ಯೆ ಯಾವುದೇ ಅಶಾಂತಿ ನಿರ್ಮಾಣಗೊಳ್ಳದಂತೆ ನೋಡಿಕೊಳ್ಳುವ ಇವರು ಹಲವಾರು ಕುಟಂಬ ಕಲಹಗಳನ್ನು ಯಶಸ್ವಿಯಾಗಿ ಬಗೆಹರಿಸಿಕೊಟ್ಟ ಉದಾಹರಣೆಗಳು ಇದೆ. ಯಾವುದೇ ಸಮಯದಲ್ಲಿ ಠಾಣೆಗೆ ಸಾರ್ವಜನಿಕರು ಯಾವುದೇ ಭಯವಿಲ್ಲದೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಬರಬಹುದು ಎಂಬ ವಾತಾವರಣವನ್ನು ನಿರ್ಮಿಸಲಾಗಿದೆ.
ರುಕ್ಮನಾಯ್ಕ್ ಪರಿಚಯ: ಪೊಲೀಸ್ ಇಲಾಖೆಯಲ್ಲಿ 28 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರುಕ್ಮನಾಯ್ಕ್ ಅವರು ಮಂಗಳೂರಿನ ಸಂಚಾರ ಪೂರ್ವ, ಪುತ್ತೂರು ಗ್ರಾಮಾಂತರ ಬಳಿಕ ಹೆಡ್ ಕಾನ್ಸ್‌ಟೇಬಲ್ ಆಗಿ ಸುರತ್ಕಲ್, ಪುಂಜಾಲಕಟ್ಟೆ, ಎ.ಎಸ್.ಐ ಆಗಿ ಪುತ್ತೂರು ಗ್ರಾಮಾಂತರ, ಉಪ್ಪಿನಂಗಡಿಯಲ್ಲಿ ಕರ್ತವ್ಯ ನಿರ್ವಹಿಸಿ ಎಸ್.ಐ.ಆಗಿ ಕಡಬ ಠಾಣೆಗೆ ವರ್ಗಾವಣೆಗೊಂಡಿದ್ದರು. ಪ್ರಸ್ತುತ ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ಕೃಷ್ಣಗಿರಿ ನಿವಾಸಿಯಾಗಿರುವ ಇವರು ಪತ್ನಿ ಲಕ್ಷ್ಮೀ, ಹಾಗೂ ಪುತ್ರ ರೋಹಿತ್ ಪುತ್ರಿ ಲತಾಶ್ರೀ ಅವರೊಂದಿಗೆ ಸಂಸಾರ ನಡೆಸುತ್ತಿದ್ದಾರೆ.
ಉತ್ತಮ ಕರ್ತವ್ಯ ನಿರ್ವಹಣೆಗೆ ಸಾರ್ವಜನಿಕರ, ಸಿಬ್ಬಂದಿಗಳ ಸಹಕಾರವೇ ಕಾರಣ: ಕಡಬ ಠಾಣೆಗೆ ಎಸ್.ಐ, ಆಗಿ ಆಗಮಿಸಿ ಇಂದಿಗೆ ಒಂದು ವರ್ಷ ಆಗುತ್ತಿರುವ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರುಕ್ಮ ನಾಯ್ಕ್ ಅವರು, ನನ್ನ ಕರ್ತವ್ಯ ನಿರ್ವಹಣೆಗೆ ಇಲ್ಲಿನ ಜನತೆ ಹಾಗೂ ಠಾಣೆಯ ಸಿಬ್ಬಂದಿಗಳು ಕಾರಣ. ಕಡಬ ಠಾಣೆ ಮಾದರಿ ಠಾಣೆ ಎಂಬುದಾಗಿ ನಮ್ಮ ಇಲಾಖೆಯಿಂದಲೇ ಗೌರವ ದೊರೆತಿದ್ದು ಇದು ನಮಗೆ ಹೆಮ್ಮೆಯಾಗಿದೆ. ಕಾನೂ ನು ಉಲ್ಲಂಘನೆ ಮಾಡುವವರ ಜತೆ ನನ್ನ ಯಾವುದೇ ರಾಜಿ ಇಲ್ಲ, ಕಾನೂನು ಪಾಲನೆ ಮಾಡುವವರಿಗೆ ನಮ್ಮ ರಕ್ಷಣೆ ಎಂದೂ ಇರುತ್ತದೆ, ಕಡಬ ಠಾಣೆಗೆ ಸಾರ್ವಜನಿಕರು ಯಾವುದೇ ಸಮಯದಲ್ಲಿ ಭೇಟಿ ನೀಡಬಹುದು, ಯಾವುದೇ ಸಮಯದಲ್ಲಿ ಏನೇ ತೊಂದರೆ ಆದರೂ ನೇರವಾಗಿ ನನಗೆ ಮಾಹಿತಿ ನೀಡಿದರೆ ಕಾನೂನು ಪಾಲನೆ ಮಾಡುವ ಜವಾಬ್ದಾರಿ ನಮ್ಮದು, ಕರ್ತವ್ಯ ಜತೆಗೆ ನಮ್ಮ ಠಾಣೆಯನ್ನು ಇನ್ನಷ್ಟು ಜನಸ್ನೇಹಿ ಠಾಣೆಯನ್ನಾಗಿ ಮಾಡುವ ಕನಸು ಹೊತ್ತಿದ್ದೆನೆ, ಯಾವುದೇ ಕೆಲಸಗಳು ಮೇಲಾಧಿಕಾರಿಗಳ ಮಾರ್ಗದರ್ಶನ ಸಹೋದ್ಯೋಗಿಗಳ ಸಹಕಾರ, ಜನರ ಆಶೀರ್ವಾದದಿಂದ ನಡೆಯುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
✍? ವಿಜಯ್ ಕಡಬ