(ನ್ಯೂಸ್ ಕಡಬ) newskadaba.com ಬಂಟ್ವಾಳ , ನ.11: ಕೊರೋನಾ ಸೋಂಕಿನಿಂದಾಗಿ ಎದುರಾದ ಸವಾಲುಗಳ ನಡುವೆಯೂ, ಬರುವ ವಾರದಲ್ಲೇ ದೀಪಗಳ ಹಬ್ಬವಾದ ದೀಪಾವಳಿ ಆಗಮಿಸಲಿದೆ. ಈ ಹಬ್ಬವನ್ನು ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿದೆ. ಸ್ವಾವಲಂಬಿ ಭಾರತವನ್ನು ಸಾಧಿಸುವ ಕನಸಿಗೆ ಅನುಗುಣವಾಗಿ, ಕಲ್ಲಡ್ಕದ ಶ್ರೀ ರಾಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಗೋಮಯವನ್ನು(ಸೆಗಣಿ) ಕಚ್ಚಾ ವಸ್ತುವಾಗಿ ಬಳಸಿಕೊಂಡು ದೀಪಾವಳಿಗಾಗಿ ಹಣತೆಯನ್ನು ಸಿದ್ಧಪಡಿಸುತ್ತಿದ್ದಾರೆ.
ಈ ಹಣತೆಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಸುಮಾರು 10,000 ಹಣತೆ ತಯಾರಿಸಲು ಈ ಒಂದು ಶಿಕ್ಷಣ ಸಂಸ್ಥೆಯು ಗುರಿಯನ್ನು ಹೊಂದಿದೆ. ಪ್ರಸ್ತುತ 2,500 ಕ್ಕೂ ಹೆಚ್ಚು ಹಣತೆಗಳನ್ನು ತಯಾರಿಸಲಾಗಿದೆ. ವಿದೇಶಿ ವಸ್ತುಗಳನ್ನು ತ್ಯಜಿಸಿ ಸ್ವಾವಲಂಬಿಗಳಾಗುವ ನಿಟ್ಟಿನಲ್ಲಿ ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಣತೆ ತಯಾರಿಸಲು ಮುಂದಾಗಿದ್ದಾರೆ. ಶ್ರೀರಾಮ ಪಿಯು ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ್ ಕಾಯರ್‍ಕಟ್ಟೆ ಈ ಹಣತೆ ತಯಾರಿ ಕಾರ್ಯದ ನಿರ್ವಾಹಕರಾಗಿದ್ದಾರೆ. ಸಂಸ್ಥೆಯ ಶಿಕ್ಷಕರು ಮತ್ತು ಇತರ ಸಿಬ್ಬಂದಿಗಳು ಕೂಡ ಇದಕ್ಕೆ ಕೈ ಜೋಡಿಸಿದ್ದಾರೆ. ಈ ಹಣತೆಯನ್ನು ತಲಾ 5 ರೂ.ಗೆ ಮಾರಾಟ ಮಾಡಲು ಆಯೋಜಿಸಲಾಗಿದೆ. ಹಾಗೆಯೇ ಈ ಹಣತೆ ಮಾರಾಟದ ಹೊಣೆಯನ್ನು ಈ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ವಹಿಸಿಕೊಂಡಿದ್ದು ಆನ್‌ಲೈನ್ ಬುಕ್ಕಿಂಗ್ ಮೂಲಕ ಇ-ಮಾರ್ಕೆಟಿಂಗ್ ವ್ಯವಸ್ಥೆ ಮಾಡಿದ್ದಾರೆ. ಸೆಗಣಿಯಿಂದ ಸಿದ್ದಪಡಿಸಿದ ಹಣತೆಗೆ ಎಣ್ಣೆ ಅಥವಾ ತುಪ್ಪವನ್ನು ಬಳಸಬೇಕಾಗಿದ್ದು ಸುಮಾರು 45 ನಿಮಿಷಗಳ ಕಾಲ ದೀಪ ಬೆಳಗಬಹುದಾಗಿದೆ. ಬಳಿಕ ಹಣತೆಯನ್ನೇ ಸುಟ್ಟುಹಾಕಿದರೂ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.