ಕಡಬ: ಮಸೀದಿಯಲ್ಲಿ ಕರ್ಕಶ ಧ್ವನಿವರ್ಧಕ ಬಳಕೆ ಮಾಡಿಲ್ಲ | ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರ ನಡೆಯುತ್ತಿದೆ ➤ ಕಡಬ ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷ ಮೀರಾ ಸಾಹೇಬ್ ಆರೋಪ

(ನ್ಯೂಸ್ ಕಡಬ) newskadaba.com ಕಡಬ, ನ.08. ಮಸೀದಿಯಲ್ಲಿ ಬಾಂಗ್ ಕೊಡಲು ವೇಳೆ ಧ್ವನಿವರ್ಧಕವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯ ಮುಖಂಡ ರವಿರಾಜ್ ಶೆಟ್ಟಿ ನೇತೃತ್ವದಲ್ಲಿ ಕಡಬ ಪೊಲೀಸರಿಗೆ ದೂರು ನೀಡಿರುವುದಕ್ಕೆ ಪ್ರತಿಕ್ರಿಯಿಸಿರುವ ಕಡಬ ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷ ಹಾಜಿ ಸೈಯದ್ ಮೀರಾ ಸಾಹೇಬ್, ಮಸೀದಿಯಲ್ಲಿ ಕರ್ಕಶವಾಗಿ ಧ್ವನಿವರ್ಧಕ ಬಳಕೆ ಮಾಡಿಲ್ಲ. ಇದು ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.

ಶನಿವಾರದಂದು ಕಡಬ ತಹಶೀಲ್ದಾರ್ ಹಾಗೂ ಕಡಬ ಪೋಲಿಸರಿಗೆ ಮನವಿ ನೀಡಿದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದೂ ಜಾಗರಣ ವೇದಿಕೆಯ ರವಿರಾಜ್ ಶೆಟ್ಟಿ ಹಾಗೂ ಇತರರು ಕಡಬ ಠಾಣೆಗೆ ದೂರು ನೀಡಿ, ಕೇಪು ಮಸೀದಿಯಲ್ಲಿ ಕರ್ಕಶವಾಗಿ ದ್ವನಿವರ್ಧಕ ಬಳಸಲಾಗುತ್ತಿದೆ ಎಂದು ಆರೋಪ ವ್ಯಕ್ತಪಡಿಸಿದ್ದಾರೆ. ಇದು ಸರಿಯಲ್ಲ. ಕುಟ್ರುಪ್ಪಾಡಿ ಗ್ರಾಮದ ಕೇಪು ಅಲ್ ರಝ್ವಿಯಾ ಮಸೀದಿಯು ಕರ್ನಾಟಕ ಸರಕಾರದ ವಕ್ಫ್ ಬೋರ್ಡ್ ನೊಂದಾಯಿತ ಸಂಸ್ಥೆಯಾಗಿದ್ದು, ಎಲ್ಲಾ ಸಂಸ್ಥೆಗಳಲ್ಲಿಯೂ ಕೂಡಾ ಬಾಂಗ್(ಅಝಾನ್) ನೀಡುವ ಸಂಪ್ರದಾಯವಿರುತ್ತದೆ. ಹೀಗಿರುವಲ್ಲಿ ಕಳೆದ 10 ವರ್ಷಗಳಿಂದ ಈ ಮಸೀದಿಯಲ್ಲಿ ನಮಾಜ್ ಸಮಯ ಅಝಾನ್ ಕೊಡುವ ಪದ್ಧತಿ ಈ ಹಿಂದಿನಿಂದಲೂ ಇದ್ದು ಕಾಲೋನಿಯ ನಿವಾಸಿಗಳಿಗೆ ಸಮಯದ ಹಾಗೂ ನಮಾಜಿಗೆ ಬರುವ ಉದ್ದೇಶ ಮಾತ್ರ ಇರುತ್ತದೆ. ಈ ಭಾಗದ ಸುತ್ತಮುತ್ತಲಿನ ಎಲ್ಲಾ ಧರ್ಮೀಯರು ಸಹಬಾಳ್ವೆಯಿಂದ ಬದುಕುತ್ತಿದ್ದಾರೆ, ಈ ರೀತಿ ಅನ್ಯೋನ್ಯತೆಯಲ್ಲಿ ಇರುವಾಗ ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರ ಮಾಡಿರುವುದು ಖಂಡನೀಯ. ಕಡಬ ತಾಲೂಕಿನಲ್ಲಿ ಹಲವಾರು ಮಸೀದಿ, ದೇವಸ್ಥಾನ, ಚರ್ಚ್ ಗಳು ಇದ್ದು ಎಲ್ಲ ಧ್ವನಿವರ್ಧಕ ಬಳಸುತ್ತಿದ್ದಾರೆ. ಈ ಬಗ್ಗೆ ನಾವು ಎಂದಿಗೂ ಚಕಾರ ಎತ್ತಿಲ್ಲ, ಹೀಗಿರುವಾಗ ಕೇಪು ಮಸೀದಿಯ ಬಗ್ಗೆ ವಿನಾ ಕಾರಣ ಗೊಂದಲ ಏರ್ಪಡಿಸುವುದು ಸರಿಯಲ್ಲ ಎಂದು ಹೇಳಿದ ಸೈಯದ್ ಮೀರಾ ಸಾಹೇಬ್ ಅವರು ಈಗಾಗಲೇ ರಾಜ್ಯದ ಪೋಲೀಸ್ ಮಹಾ ನಿರ್ದೇಶಕರಿಂದ ಮಸೀದಿಗಳ ಧ್ವನಿವರ್ಧಕ ತೆರವಿಗೆ ಡಿಜಿಪಿ ಆದೇಶಿಸಿಲ್ಲ ಎಂಬ ಸ್ವಷ್ಟನೆ ಬಂದಿರುತ್ತದೆ. ಈಗಾಗಲೇ ಸುಪ್ರೀಂಕೋರ್ಟ್ ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆ ಬಗ್ಗೆ ವಿವರವಾದ ಮಾರ್ಗಸೂಚಿ ಹೊರಡಿಸಿದೆ. ರಾತ್ರಿ 10 ರಿಂದ ಬೆಳಗ್ಗೆಯ ತನಕ ಧ್ವನಿವರ್ಧಕ ಬಳಕೆ ಮಾಡಲು ನಿರ್ಬಂಧ ವಿಧಿಸಿದೆ. ಜೊತೆಗೆ ಧ್ವನಿವರ್ಧಕದಲ್ಲಿನ ಶಬ್ಧದ ಪ್ರಮಾಣ 75 ಡೆಸಿಬಲ್ ಗಿಂತ ಹೆಚ್ಚಿರಬಾರದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ನಾವು ಇದರಂತೆ ನಡೆಯುತ್ತಿದ್ದೇವೆ ಎಂದು ಹೇಳಿದರು.

Also Read  ಬೆಳ್ತಂಗಡಿ: ರಿಕ್ಷಾ ಚಾಲಕನಿಗೆ ಹಲ್ಲೆ..!!

ಪತ್ರಿಕಾಗೋಷ್ಟಿಯಲ್ಲಿ ಆಲ್ ಇಂಡಿಯ ಮುಸ್ಲಿಂ ಡೆವಲಪ್‌ಮೆಂಟ್ ಫಾರಂನ ಕಡಬ ತಾಲೂಕು ಅಧ್ಯಕ್ಷ ಹಾಜಿ ಹನೀಫ್ ಕೆ.ಎಂ., ಕಡಬ ತಾಲೂಕು ಮುಸ್ಲಿಂ ಜಮಾಹತ್ ಸಂಯೋಜಕ ಫಝಲ್ ಕೋಡಿಂಬಾಳ, ಕೇಪು ಅಲ್ ರಝ್ವಿಯಾ ಮಸೀದಿಯ ಗೌರವಾಧ್ಯಕ್ಷ ಹಮೀದ್, ಉಪಾಧ್ಯಕ್ಷ ಸೈಯದ್ ಹುಸೇನ್, ಕೋಶಾಧಿಕಾರಿ ಇಕ್ಬಾಲ್, ಸದಸ್ಯರಾದ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.

Also Read  ವಿಟ್ಲ: ಜಾತ್ರೆಯಲ್ಲಿ ವ್ಯಾಪಾರಿ ಮೇಲೆ ಹಲ್ಲೆ ಪ್ರಕರಣ ➤ ಆರೋಪಿಗಳು ಅರೆಸ್ಟ್

ಮನವಿ ನೀಡುವ ಸಂದರ್ಭದಲ್ಲಿ ಮರ್ದಾಳ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ಹಮೀದ್ ತಂಙಳ್, ಮಹಮ್ಮದಿಯ ಜುಮ್ಮಾ ಮಸೀದಿ ಕಳಾರ ಇದರ ಕಾರ್ಯದರ್ಶಿ ಇಸ್ಮಾಯಿಲ್ ಕೆ.ಎಚ್, ಉಪಾಧ್ಯಕ್ಷ ಇಸ್ಮಾಯಿಲ್ ಬಿ.ಡಿ.ಎಸ್., ಕೇಪು ಅಲ್ರಝ್ವಿಯಾ ಮಸೀದಿಯ ಕಾರ್ಯದರ್ಶಿ ಹಬೀಬ್ ರಹ್ಮಾನ್, ಇಮಾಮರಾದ ರಿಜ್ವಾನ್ ರಝ್ವೀ, ಪ್ರಮುಖರಾದ ಶಾಹಿದ್, ಇರ್ಷಾದ್, ಶಕೀಲ್, ಫಝಲ್, ಮಹಮ್ಮದ್ ಶಾಕೀರ್, ಮಹಮ್ಮದ್ ಸುಬಾನ್, ಬಾಬುಲ ಸಾಹೇಬ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top