ಭುವನೇಶ್ವರಿ ಹೆಗಡೆ ಎಂಬ ನಗೆಬುಗ್ಗೆ

(ನ್ಯೂಸ್ ಕಡಬ) newskadaba.com ವಿಶೇಷ ಲೇಖನ, ಜೂ.05. ನಮ್ಮ ಮನಸ್ಸಿನ ಸ್ಥಿತಿಯನ್ನು ಹಾವಭಾವಗಳ ಮೂಲಕ ಒಂದು ಮಿತಿಯಲ್ಲಿ ಹೊರಗೆಡಬಹುದಾದರೂ, ಅದರ ನೈಜ ಅಭಿವ್ಯಕ್ತಿಯಾಗುವುದು ನಗೆಯಲ್ಲಿಯೇ ನಗಬೇಕು ಎಂದಾಗ ನಗಲಿಕ್ಕೆ ಆಗದಿದ್ದರೂ ನಮಗೆ ತಿಳಿಯದಂತೆ ನಮ್ಮ ನಗುವನ್ನು ನಾವೇ ವಿಸ್ಮಯ ಪಡುವ ರೀತಿಯಲ್ಲಿ ತೆರೆದಿಡುವುದು ನಮ್ಮ ದಂತಪಂಕ್ತಿಗಳು ಕೆಲವೊಮ್ಮೆ ಸುಂದರ ದಂತ ಪಂಕ್ತಿಗಳಿದ್ದರೂ ಜನರು ನಗುವುದೇ ಇಲ್ಲ. ಈ ಜಗತ್ತೆ ಹಾಗೆ ಎಲ್ಲವೂ ವ್ಯವಹಾರಿಕವಾಗುತ್ತಿರುವ ಈ ಕಾಲಫಟ್ಟದಲ್ಲಿ ಜನರು ನಗಲೂ ಇಷ್ಟು ಜಿಪುಣರಾಗಿರುತ್ತಾರಲ್ಲ ಎಂದು ನಾನು ಹಲವು ಬಾರಿ ಕೊರಗಿದ್ದುಂಟು. ಹಾಗಾದರೆ ಸುಂದರ ದಂತ ಪಂಕ್ತಿಗಳಿದ್ದು ನಗಲಾರದ ಜನರನ್ನು ನಗಿಸುವುದು ಹೇಗಪ್ಪಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗದಿದ್ದಾಗ ನನಗೆ ನೆನಪಾಗಿದ್ದು, ನಮ್ಮ ಭುವನೇಶ್ವರಿ ಹೆಗಡೆ ಎಂಬ ಸರಳ ವಿರಳ ನಗೆ ಬುಗ್ಗೆ. ಯಾಕೆಂದರೆ ಹಲ್ಲಿಲ್ಲದವರನ್ನೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ಮತ್ತು ಸುಂದರವಾಗ ದಂತ ಪಂಕ್ತಿಯಿದ್ದರೂ ಯಾವಾಗಲೂ ಹರಳೆಣ್ಣೆ ಕುಡಿದಂತೆ ಮುಖ ಗಂಟಿಕ್ಕಿ ಕೊಂಡಿರುವವರನ್ನು ನಗಿಸುವ ಕಲೆಯನ್ನು ಕರತಲಾಮಲಕ ಮಾಡಿಕೊಂಡ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಮೊದಲ ಪಂಕ್ತಿಯಲ್ಲಿ ಎದ್ದುರಾಗುವ ಹೆಸರೇ ನಮ್ಮ ಕಥಾವಾಯಕಿ ಭುವನೇಶ್ವರಿ ಹೆಗಡೆ.

ಮುಖದಲ್ಲಿ ಮಾಸದ ಕಿರುನಗುವಿನೊಂದಿಗೆ ಅತ್ಯಂತ ಸರಳ, ಅಪ್ಪಟ ಭಾರತೀಯ ಗೃಹಿಣಿಯಂತೆ ನಮಗೆದುರಾಗುವ ಭುವನೇಶ್ವರಿ ಹೆಗಡೆಯವರು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುವ ಅಸಾಮಾನ್ಯ ಮಹಿಳೆ. ನಗು ಎನ್ನುವುದು ಒಂದು ಕಲೆ. ನಗಿಸುವುದು ಇನ್ನೊಂದು ಕಲೆ. ಈ ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ. ಧನಾತ್ಮಕ ಚಿಂತನೆಯುಳ್ಳ ಎಲ್ಲ ಮನುಷ್ಯರೂ ನಗುವಿನಲ್ಲಿಯೇ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಂಡುಕೊಳ್ಳುತ್ತಾರೆ. ಸಮಾಜಮುಖಿ ಚಿಂತನೆಯುಳ್ಳ ವ್ಯಕ್ತಿಗಳು ತಾವು ನಗುವುದರ ಜೊತೆಗೆ ಇತರರನ್ನು ನಗಿಸಿ ಅವರ ನಗುವಿನಲ್ಲಿ ತಮ್ಮ ನೋವನ್ನು ಮರೆಯುತ್ತಾರೆ ಅಂತಹಾ ವ್ಯಕ್ತಿಗಳ ಜೊತೆಗೆ ನಾವು ಹೆಚ್ಚು ಹೆಚ್ಚು ವ್ಯವಹರಿಸಿದಲ್ಲಿ ನಮಗೂ ಧನಾತ್ಮಕ ಚಿಂತನೆಗಳು ಮೂಡಬಹುದು. ಮಾನಸಿಕ ಒತ್ತಡ ಕಡಿಮೆಯಾಗಿ, ಹೆಚ್ಚು ನಗುತ್ತಾ ನೂರು ಕಾಲ ಸುಖವಾಗಿ ಬದುಕಬಹುದು. ಇಂತಹಾ ವ್ಯಕ್ತಿಗಳ ಸಾಲಿಗೆ ಯಾವತ್ತೂ ಮೊದಲಿಗರಾಗಿ ಸೇರುವ ಅರ್ಹತೆ ನಮ್ಮ ಭುವನೇಶ್ವರಿ ಹೆಗಡೆಯವರು, ನಾವು ಬದುಕುತ್ತಿರುವ ಈಗಿನ ವ್ಯವಹಾರಿP,À ಲೆಕ್ಕಚಾರದ ಬದುಕಿನಲ್ಲಿ ನಗಲೂ ಕೂಡಾ ವ್ಯಾಪಾರಿ ಮನೋಭಾವ ತಾಳುವಂತಹ ಪರಿಸ್ಥಿತಿ ಬಂದೊದಗಿದೆ. ಬದುಕಿನ ಮಹತ್ತರವಾದ ಗಳಿಗೆಯಲ್ಲಿ, ಕಷ್ಟಕಾಲದಲ್ಲಿ ಆಶಾಕಿರಣವಾಗಿ ಬದುಕಿಗೆ ಹೊಸ ಚೈತನ್ಯ ತುಂಬಿ ದಾರಿತೋರುವ ಶಕ್ತಿ ನಗುವಿಗೆ ಖಂಡಿತಾ ಇದೆ. ಈ ಕಾರಣದಿಂದಲೇ ಬಲ್ಲವರು ಹೇಳುತ್ತಾರೆ ನಕ್ಕರೆ ಅದೇ ಸ್ವರ್ಗ, ನಗದಿದ್ದರೆ ಬದುಕೇ ನರಕ ಹೀಗೆ ತಾವು ನಗುತ್ತಾ ತಮ್ಮವರನ್ನೂ ನಗಿಸುವ ನಿಷ್ಕಲ್ಮಷ ಮನಸ್ಸಿನ ಸಾಮಾನ್ಯ ಮನುಷ್ಯರು ಆರೋಗ್ಯಪುರ್ಣ ಸಮಾಜದ ನಿರ್ಮಾಣಕ್ಕೆ ಅತ್ಯಂತ ಅವಶ್ಯಕ. ಅಂತಹ ವ್ಯಕ್ತಿಗಳ ಸಾಲಿನಲ್ಲಿ ಮೊದಲಿಗರಾಗಿ ಕಾಣಸಿಗುವವರೇ ನಮ್ಮ ಭುವನೇಶ್ವರಿ ಹೆಗಡೆಯವರು. ಕನ್ನಡದ ಹಾಸ್ಯ ಸಾಹಿತ್ಯದ ಪ್ರಖ್ಯಾತರ ನಡುವೆ ಭುವನೇಶ್ವರಿ ಹೆಗಡೆಯವರಿಗೆ ವಿಶಿಷ್ಟ ಸ್ಠಾನವಿದೆ. ಭು.ಹ. ಎಂಬ ಸಂಕ್ಷಿಪ್ತ ನಾಮದಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಯೆ ಮೂಡಿಸಿರುವ ಭುವನೇಶ್ವರಿ ಹೆಗಡೆಯವರು, ಅರ್ಥಶಾಸ್ತ್ರದ ಪ್ರಾಧ್ಯಾಪಕರು ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ಅವರನ್ನು ಕನ್ನಡ ಪ್ರಾಧ್ಯಾಪಕಿ ಎಂದೇ ತಿಳಿದುಕೊಂಡವರು ಅನೇಕ. ಅದು ಅವರ ಸಾಹಿತ್ಯ ನಿರ್ಮಿತಿಗೆ ಸಿಕ್ಕ ಉಡುಗೊರೆ. ತಮ್ಮದೇ ಶೈಲಿಯಲ್ಲಿ ಹಾಸ್ಯ ಸಾಹಿತ್ಯದಲ್ಲಿ ಕೃಷಿ ಮಾಡಿರುವ ಭುವನೇಶ್ವರಿ ಹೆಗಡೆಯವರು ಉಳಿದವರಿಗಿಂತ ಬಹಳ ಭಿನ್ನ. ತಬ್ಬಿಬ್ಬಾಗಿಸುವ ವ್ಯಂಗ,್ಯ ಮನಸ್ಸನ್ನು ಚುಚ್ಚಿ ನೋಯಿಸುವ ಕಟಕಿ, ತನ್ನನ್ನು ಹೊರತುಪಡಿಸಿ ಇತರರೂ ನಿಕೃಷ್ಟ ಎನ್ನುವ ಅಪಹಾಸ್ಯ ಇದ್ಯಾವುದೂ ಇವರ ಸಾಹಿತ್ಯ ಲೋಕದಲ್ಲಿ ದುರ್ಬಿನು ಹಿಡಿದು ಹುಡುಕಿದರೂ ಸಿಗಲಿಕ್ಕಿಲ್ಲ. ತಮ್ಮ ಕಾಲದ ಎಲ್ಲ ಬದಲಾವಣಿಗಳಿಗೆ ತಕ್ಷಣವೇ ಸ್ಪಂದಿಸಿ ಕಾಲಕ್ಕೆ ತಕ್ಕಂತೆ ಕೊಲ ಎಂಬಂತೆ, ಕುಟುಂಬ ಸೌಖ್ಯ, ಮನೆ ಮತ್ತು ವೃತ್ತಿವಲಯದ ಸ್ತ್ರೀಲೋಕ ಪರಿಸರ ಕಾಳಜಿ ಮಾನವ ಪ್ರೇಮ ಮೊದಲಾದ ಎಲ್ಲ ಜೀವ ಪರ ಮೌಲ್ಯಗಳನ್ನು ತಮ್ಮೊಳಗೆ ಆವರ್ತಿಸಿಕೊಂಡಿರುವ ಅವರ ಬರಹಗಳು ಭುವನೇಶ್ವರಿ ಹೆಗ್ಗಡೆ ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎಂದರೂ ಅತಿಶಯೋಕ್ತಿಯಲ್ಲ ದೈನಂದಿನ ಜೀವನದಲ್ಲಿ ನಮ್ಮ ಸುತ್ತ ಮುತ್ತ ನಡೆಯುವ ಘಟನೆಗಳು, ಸನ್ನಿವೇಶಗಳು ಸಂಪರ್ಕಕ್ಕೆ ಬರುವ ವ್ಯಕ್ತಿತ್ವಗಳು ನೋಡುವ ನೋಟದಲ್ಲಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ ನೆಗೆಟಿವ್ ಆಗಿ ಬಿಡಬಹುದಾದ ಅಪಾಯದಿಂದ ತಪ್ಪಿಸಿಕೊಂಡು ಭುವನೇಶ್ವರಿ ಅವರ ದೃಷ್ಟಿಯಲ್ಲಿ ಸಕಾರಾತ್ಮಕವಾಗಿ ಬದಲಾಗುವ ಇಂದ್ರಜಾಲ ಅವರ ಪ್ರತಿಯೊಂದು ಬರಹದಲ್ಲಿ ಹೊಳೆದುಬಿಡುತ್ತದೆ.

Also Read  ಅಡಕೆ ಹಿಂಗಾರಕ್ಕೆ ರೋಗ ಭಾಧೆ ; ಕಂಗಾಲಾದ ರೈತ

ನಗುವು ಸಹಜದ ಧರ್ಮ ನಗಿಸುವುದು ಪರಧರ್ಮ
ನಗುತ್ತ ಕೇಳುವ ನಗುವುದತಿಶಯದ ಧರ್ಮ
ನಗುವ ನಗಿಸುವ ನಗು ನಗುತ ಬಾಳುವ ವರದ
ಮಿಗೆ ನೀ ಬೇಡಿಕೊಳ್ಳೊ ಮಂಕುತಿಮ್ಮ.

ಮನುಷ್ಯನ ವಿಶೇಷತೆಯೇ ನಗುವುದು. ಅವನು ಎಲ್ಲಾ ಪ್ರಾಣಿಗಳಿಗಿಂತ ಭಿನ್ನ ಆಗುವುದು ನಗುವುದರಿಂದಾಗಿ ಎಂದಿದ್ದ ಅರಿಸ್ಟಾಟಲ್, ಹೌದು ನಾವು ನಮ್ಮದೇ ಆದ ಕೆಲವು ಸಂದರ್ಭಗಳಲ್ಲಾದರೂ ನಿರ್ಭಾವುಕತೆಯನ್ನು ಬಿಟ್ಟು ಮನಸಾರೆ ನಗುತ್ತೇವೆ. ಆದರೆ ಇನ್ನೊಬ್ಬರನ್ನು ನಗಿಸುವುದು, ನಮ್ಮೊಂದಿಗೆ ಇರುವವರು ನಗುವಂತೆ ಮಾಡುವುದು ಸುಲಭದ ಮಾತಲ್ಲ. ಇನ್ನೊಬ್ಬರ ನಗುವನ್ನು ಕೇಳಿ ನಾವು ಅದಕ್ಕೆ ಪ್ರತಿಸ್ಪಂದಿಯಾಗಿ ನಗುವುದು ಮತ್ತು ಇತರರಷ್ಟು ನಗಿಸುವುದಂತೂ ಮತ್ತೂ ಸುಲಭವಲ್ಲ ನಾವು ನಮ್ಮನ್ನು ನೋಡಿ ವಿಶ್ಲೇಷಿಸಿಕೊಂಡು ನಕ್ಕು ನಮ್ಮ ಸುತ್ತಲಿನವರ ನಡಾವಳಿಗಳನ್ನು ನಗುಮುಖದಿಂದ ಭಾವಿಸಿ ನಕ್ಕು ಹಗುರಾಗುವುವಂತೂ ಸುಲಭದ ಮಾತೇ ಅಲ್ಲ. ಇವೆಲ್ಲವನ್ನೂ ದುಡ್ಡ್ಟಿಗಾಗಿ ಮಾಡುವವರು ಹಲವರು ನಗುವುದರ ಮೇಲಿನ ಪ್ರೀತಿಗಾಗಿ ಮಾಡುವವರು ಕೆಲವರು ಅಂತಹ ಕೆಲವೇ ಕೆಲವರಲ್ಲಿ ಭುವನೇಶ್ವರಿ ಹೆಗಡೆ ಅವರು ಒಬ್ಬರು. ಅವರೇ ಹೇಳಿಕೊಳ್ಳುವಂತೆ ಅವರನ್ನು “ನಗೆ ಮೇರೆ ಮೀರಿದ ಮಹಾಪುರದಂತೆ ಅದಕ್ಕೊಂದು ದಾರಿ ಕೊಡಲೇ ಬೇಕಾದ ಪ್ರಸಂಗದಿಂದ” ನಗೆ ಲೇಖನಗಳ ಸೃಷ್ಟಿ ಆಗಿರುವುದಂತೂ ಸತ್ಯ ದೂರದ ಉತ್ತರ ಕನ್ನಡ ಜಿಲ್ಲೆಯ ಕತ್ರಗಾಲ ಎಂಬ ಸಣ್ಣ ಕುಗ್ರಾಮದಲ್ಲಿ ಮುಕ್ತವಾಗಿ ಗಾಳಿ ಬೆಳಕಿಗೆ ತೆರೆದುಕೊಂಡು ಬೆಳೆದ ಭುವನೇಶ್ವರಿ ಹೆಗಡೆಯವರಿಗೆ, ನಗರ ಪ್ರದೇಶದಲ್ಲಿ ತಮ್ಮ ಬದುಕಿನ ಎಲ್ಲಾ ಇತಿ ಮಿತಿಗಳ ನಡುವೆ ತಮ್ಮ ಅಸ್ತಿತ್ವವನ್ನು ಕಾಯ್ದುಕೊಳ್ಳುವಂತೆ ಮಾಡಿರುವುದು, ಅವರು ಆಯ್ಕೆ ಮಾಡಿಕೊಂಡ “ನಗುವೆ ನಗಿಸುವ, ನಗಿಸಿ ನಗುತ” ಬಾಳುವ ದೀಕ್ಷೆ ಎಂಬುದಂತೂ ಸತ್ಯವಾದ ಮಾತು.
ಭುವನೇಶ್ವರಿ ಹೆಗಡೆ ಅವರು ಬರೆಯುವಷ್ಟೇ ಮಾತಿನಲ್ಲೂ ನಿಸ್ಸಿಮರು ಅವರು ಮಾತನಾಡಲು ಆರಂಭಿಸಿದರೆ ಉತ್ತರ ಕನ್ನಡದ ಅಡಿಕೆ ತೋಟದ ನಡುವಿನ ಹೆಗಡೆಯವರ ಚಾವಡಿಯ ಮನೆಯಿಂದ ಹೊರಟು ನಾಡೆಲ್ಲ ಸ್ಪೂತಿ ಕೊನೆಗೆ ಮುಕ್ತಾಯವಾಗುವುದು ಅವರ ಎರಡನೇ ತವರು ಮನೆಯಾದ ನಮ್ಮ ಮಂಗಳೂರಿನಲ್ಲಿಯೇ ಹುಟ್ಟಿದ್ದು ಉ.ಕ ದಲ್ಲಾದರೂ ಅವರ ಕಾರ್ಯಕ್ಷೇತ್ರ ಮತ್ತು ಸಾಹಿತ್ಯದ ಕೃಷಿ ಕ್ಷೇತ್ರ ದ.ಕ ಮಂಗಳೂರೇ ಆಗಿರುತ್ತದೆ. 35 ವರ್ಷಗಳಿಂದ ಮಂಗಳೂರಿನಲ್ಲಿಯೇ ವಾಸವಾಗಿ ನಮ್ಮ ಕುಡ್ಲದ ಹೆಣ್ಣು ಮಗಳಾಗಿ ಬಿಟ್ಟಿದ್ದಾರೆ. ಆದರೆ ಅವರ ಮಾತಿನ ಧಾಟಿಯಲ್ಲಿ ಎಲ್ಲಿಯೂ ಹುಟ್ಟೂರಾದ ಉ.ಕ. ಜಿಲ್ಲೆಯ ತಿಳಿಹಾಸ್ಯದ ಬುಗ್ಗೆ ಯಾವತ್ತು ಬತ್ತಿಲ್ಲ “ಇನ್ನೂ ಕೇಳಬೇಕು, ಛೇ ಇಷ್ಟು ಬೇಗ ನಿಲ್ಲಿಸಿಬಿಟ್ಟರಲ್ಲ” ಎಂದೆನಿಸುವ ರೀತಿಯಲ್ಲಿ ಕೇಳುಗರನ್ನು ಮಂತ್ರಮುಗ್ದರಾಗುವಂತೆ ಮಾತಾಡುವ ಕಲೆ ಅವರಿಗೆ ದೈವದತ್ತವಾಗಿ ಬಂದಿದೆ. ಅವರ ಮಾತು ಎಂದಿಗೂ ಯಾರಿಗೂ ಬೇಸರ ನೋವು ತರಿಸಿದ ನಿದರ್ಶನಗಳೇ ಇಲ್ಲ. ಉತ್ತರ ಕನ್ನಡದ ಸಮೃದ್ಧ ಪ್ರಕೃತಿ ಮತ್ತು ತುಂಬಿದ ಕುಟುಂಬದ ಬದುಕು ಅವರಿಗೆ ಅನನ್ಯ ಜೀವನಾನುಭವ ನೀಡಿದೆ. ಇದರ ಜೊತೆಗೆ ಒಳ್ಳೆಯ ಓದು, ವ್ಯಕ್ತಿತ್ವಗಳನ್ನು ಸನ್ನಿವೇಶಗಳನ್ನು ಆಳವಾಗಿ ಗೃಹಿಸುವ ಸಂವೇಧನಾ ಶೀಲ ಮನಸ್ಸು ಕನ್ನಡ, ತುಳು ಸಂಸ್ಕೃತ,ಇಂಗ್ಲೀಷ್ ಈ ಎಲ್ಲ ಭಾಷೆಗಳ ವಿಶೇಷ ಜ್ಞಾನ ಅವರನ್ನು ಓರ್ವ ಉತ್ತಮ ವಾಗ್ಮಿ ಮತ್ತು ಲೇಖಕಿಯನ್ನಾಗಿ ಮಾಡಿದೆ. ಇದು ಅವರ ಪ್ರಬಂಧಗಳ ವಸ್ತು ವೈವಿಧ್ಯದಲ್ಲಿ ಚಾಕಚಕ್ಯತೆಯ ನಿರೂಪಣೆಯ ಲವಲವಿಕೆಯಲ್ಲಿ ಭಾಷಾ ನೈಪುಣ್ಯದ ಪದ ಚಮತ್ಕಾರಗಳಲ್ಲಿ ಸಾಬೀತಾಗುತ್ತದೆ.

Also Read  ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆ

ಭುವನೇಶ್ವರಿ ಹೆಗಡೆ ಕಿರು ಪರಿಚಯ
ಕನ್ನಡ ಸಾಹಿತ್ಯದಲ್ಲಿ ಪ್ರಮುಖ ಹಾಸ್ಯ ಬರಹಗಾರ್ತಿ ಮತ್ತು ಹಾಸ್ಯ ವಾಗ್ಮಿಯಾಗಿ ಗುರುತಿಸಿಕೊಂಡಿರುವ ಶ್ರೀಯುತರು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಮನಃಶಾಸ್ತ್ರದಲ್ಲಿ ಎಂ ಎ ಪದವಿ ಪಡೆದಿರುತ್ತಾರೆ. ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಅಸೋಸಿಯೇಟ್ ಪ್ರೋಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದು. ಇದೇ ತಿಂಗಳ 31ರಂದು ವೃತ್ತಿಯಿಂದ ನಿವೃತ್ತಿಯಾಗಲಿದ್ದಾರೆ. ಇವರ 500ಕ್ಕೂ ಹೆಚ್ಚು ಹಾಸ್ಯ ಪ್ರಬಂಧಗಳು ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಶ್ರೀಯುತರು “ಮುಗುಳು ನಕ್ಕು ಹಗುರಾಗಿ” “ಎಂಥದ್ದು ಮಾರಾಯ್ರೆ” “ವಲಲ ಪ್ರತಾಪ”, “ಹಾಸಭಾ¸”À, “ಮೃಗಯಾ ವಿನೋದ”, “:ಬೆಟ್ಟದ ಭಾಗೀರಥಿ” “ಮಾತನಾಡಲು ಮಾತೇಬೇಕೆ. “ಪುಟ್ಟಿಯ ಪಟ್ಟೆ ಹುಲಿ”, ಕೈಗುಣ ಬಾಯ್ಗುಣ” ಎಂಬ ಕೃತಿಗಳನ್ನು ರಚಿಸಿದ್ದಾರೆ. ಭುವನೇಶ್ವರಿಯವರ “ಸಮಗ್ರ ಲಲಿತ ಪ್ರಬಂಧಗಳು” ಎಂಬ ಪುಸ್ತಕವು ಸ್ವಪ್ನಾಬುಕ್ ಹೌಸ್ನಿಂದ ಪ್ರಕಟಗೊಂಡಿದೆ. ಇವರು “ಸೂರು ಸಿಕ್ಕದಲ್ಲಾ”, “ಕಛೇರಿ ವೈಭವಂ” “ವಸಂತ ವ್ಯಾಧಿ” “ಕಾವ್ಯ ಕೋಲಾಹಲ” ಎಂಬ ರೇಡಿಯೋ ನಾಟಕಗಳನ್ನು ರಚಿಸಿದ್ದಾರೆ. ಇವರ ಸಭಾಕಂಪ£,À ಮೂಡ ನಂಬಿಕೆಗಳ ಬೀಡಿನಲ್ಲಿ, ಸುಲಭದಲ್ಲಿ ಸಜ್ಜನರಾಗಲಾರಿರಿ, ನಕ್ಕೂ ಹಗುರಾಗಿ ಸುಲಭದಲ್ಲಿ ಸಜ್ಜನರಾಗಲಾರಿರಿ ಮತ್ತಿತರ ಪ್ರಬಂಧಗಳು ಶಾಲಾ ಕಾಲೇಜುಗಳ ಪಠ್ಯವಾಗಿ ಆಯ್ಕೆಯಾಗಿದೆ ಭುವನೇಶ್ವರಿಯವರು ಅಂಕಣಗಾರ್ತಿಯಾಗಿಯೂ ಪ್ರಸಿದ್ದರು. ಮಂಗಳೂರು ಮುಗುಳ್ನಗೆ (ಲಂಕೇಶ್ ಪತ್ರಿಕೆ) ನಗೆಮೊಗೆ (ವಾರ್ತಾಭಾರತಿ) ಲಘುಬಗೆ (ಉದಯವಾಣಿ) ಎಂಥದ್ದು ಮಾರಾಯ್ರೇ (ಕರ್ಮವೀರ) ಪಡುಪಡುಸಾಲೆ (ಪ್ರಜಾವಾಣಿ) ಮಗುಳು (ವಿಜಯವಾಣಿ) ಇವರು ನಿರ್ವಹಿಸಿದ ಅಂಕಣಗಳು ಭುವನೇಶ್ವರಿಯವರು ಸಲ್ಲಿಸಿದ ವಿಫುಲ ಸಾಹಿತ್ಯ ಸೇವೆಯಿಂದಾಗಿ ಹಲವಾರು ಪುರಸ್ಕಾರಗಳು ಅವರನ್ನರಸಿ ಬಂದಿದೆ. ಕನ್ನಡ ಸಾಹಿತ್ಯ ಅಕಾಡಮೆ ಪ್ರಶಸ್ತಿ, (1988-1997) ಪಡುಕೋಣೆ ರಮಾನಂದ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ 1997 – 2000 ಬನಹಟ್ಟಿ ಪುಸ್ತಕ ಬಹುಮಾನ, ಪುತ್ತೂರಿನ ಉಗ್ರಾಣ ಪ್ರಶಸ್ತಿ(1998) ಅಕ್ಷರಶ್ರೀ ರಾಜ್ಯ ಪ್ರಶಸ್ತಿ (2008), ಶಿರಸಿಯ ಬಿ. ಹೆಚ್. ಶ್ರೀಧರ ಪ್ರಶಸ್ತಿ (2014) ಬಿಗ್ ಎಫ್ ಎಂ ಕನ್ನಡತಿ (2015) ಹುಬ್ಬಳ್ಳಿಯ ಅವ್ವ ಪ್ರಾತಿಷ್ಠಾನದ ಅವ್ವ ಪ್ರಶಸ್ತಿ (2017) ಇವರಿಗೆ ಒಲಿದ ಪ್ರಶಸ್ತಿಗಳು. 2011ರಲ್ಲಿ ಅಮೇರಿಕಾದ ಕ್ಯಾಲಿಪೋರ್ನಿಯದಲ್ಲಿ ಕನ್ನಡ ಸಾಹಿತ್ಯರಂಗ ಹಾಗೂ ಕ್ಯಾಲಿಪೋರ್ನಿಯ ಕನ್ನಡ ಕೂಟದ ಸಾಹಿತ್ಯೋತ್ಸವದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದಾರೆ. 2011ರಲ್ಲಿ ಲಂಡನ್ ನಗರದ ಕನ್ನಡ ಸಂಗಮ ಸಂಸ್ಥೆ ಏರ್ಪಡಿಸಿದ ವಿಶ್ವಕನ್ನಡ ಸಮ್ಮೇಳನ ಯುರೋಪ್ 2011 ಇದರಲ್ಲಿ ಕನ್ನಡ ಹಾಸ್ಯಸಾಹಿತ್ಯ ಕುರಿತಾಗಿ ಉಪನ್ಯಾಸ ನೀಡಿದ್ದಾರೆ. 2012ರಲ್ಲಿ ಅಮೇರಿಕಾದ ಬೋಸ್ಟನ್ ಕನ್ನಡ ಕೂಟದ ರತ್ನ ಮಹೋತ್ಸವವನ್ನು ಉದ್ಘಾಟಿಸಿ ಬಾಷಣ ಮಾಡಿದ್ದಾರೆ. ಪ್ರಸ್ತುತ ಮಂಗಳೂರಿನ ಕದ್ರಿಯಲ್ಲಿ ಪತಿ ಶಂಭು ಹೆಗಡೆ ಮತ್ತು ಮಗಳು ಆಭಾ ಹೆಗಡೆ ಅವರೊಂದಿಗೆ ನೆಲಸಿದ್ದಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದ ಕಾರಂತ ಪೀಠದ ಮುಖ್ಯಸ್ಥೆಯಾಗಿರುತ್ತಾರೆ.

ಕೊನೆ ಮಾತು
ಲೇಖಕಿಯಾಗಿ ಶಿಕ್ಷಕಿಯಾಗಿ, ಗೆಳತಿಯಾಗಿ, ಬಂಧುವಾಗಿ, ಸಹೋದರಿಯಾಗಿ ಅಮ್ಮನಾಗಿ ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯಾಗಿ ತಮ್ಮ ಸಾಮರ್ಥ ಮತ್ತು ಸ್ವಪರಿಶ್ರಮದಿಂದ ಎಲ್ಲರೂ ಬಯಸುವ, ಅಸೂಯೆ ಪಡುವ ಎತ್ತರದಲ್ಲಿ ನಮ್ಮ ಭುವನೇಶ್ವರಿ ಹೆಗಡೆಯವರು ವಿರಾಜಮಾನರಾಗಿದ್ದಾರೆ. ಹೊಸ ಬರಹಗಾರರು ಹುಟ್ಟಿಕೊಂಡಾಗ ಎಲ್ಲಿ ತಮಗಿಂತ ಮುಂದೆ ಬಂದು ಬಿಡುತ್ತಾರೆಯೇ ಎಂದು ವ್ಯತ್ತಿಯ ಮತ್ಸರ ತೋರಿ ಕಾಲೆಳೆಯುವ ಈ ಕಾಲದಲ್ಲಿ, ಕಿರಿಯ ಬರಹಗಾರರನ್ನು ಹುರಿದುಂಬಿಸಿ ಮತ್ತಷ್ಟು ಬರೆಯಿರಿ ಎಂದು ಪ್ರೋತ್ಸಾಹ ನೀಡುವ ದೊಡ್ಡ ಗುಣ ಭುವನೇಶ್ವರಿ ಹೆಗಡೆಯವರದ್ದು, ಭುವನೇಶ್ವರಿ ಹೆಗ್ಗಡೆಯವರು ನಾಕಂಡಂತೆ, ಸದಾ ಹೊಸತನ್ನು ಹುಡುಕಾಡುವ, ಯಾವ ವಿಷಯವನ್ನು ಅಲ್ಲಿಗೆ ಬಿಟ್ಟು ಬಿಡುವ ಜಾಯಿಮಾನವಲ,್ಲ ಸಣ್ಣ ವಿಷಯವಾದರೂ ಪರಿಶೀಲಿಸಿ ತಿಳಿದುಕೊಳ್ಳುವ ದೊಡ್ಡ ಗುಣ ಅವರದ್ದು. ಸಣ್ಣ ಸಣ್ಣ ವಿಚಾರಗಳನ್ನು ಸಂಗತಿಯನ್ನು ವಿಸ್ತರಿಸಿ, ಗ್ರಾಹ್ಯವಾಗುವ ಹಾಗೆ ಬರೆಯುವ ಮಾತಾಡುವ ಅಧ್ಬುತ ಕೌಶಲ್ಯ ಇವರದ್ದು. ಹೊಸ ವ್ಯಕ್ತಿಗಳ ಪರಿಚಯವಾದಾಗ ಆ ಪರಿಚಯವನ್ನು ಅಲ್ಲಿಗೇ ನಿಲ್ಲಿಸುವವರಲ್ಲ ಪರಿಚಯದಿಂದ ವ್ಯಕ್ತಿಯ ಹವ್ಯಾಸ, ವೈಶಿಷ್ಟ ವಿಶೇಷಗಳನ್ನು ಅರಿತು ಪ್ರೋತ್ಸಾಹಿಸುವ ದೊಡ್ಡಗುಣ ಇವರದ್ದು ನಿಸ್ವಾರ್ಥದಿಂದ ಮಾಡುವ ಕೆಲಸ, ಯಾರೇ ಮಾಡಲಿ ಯಾವುದೇ ಮಾಡಲಿ ಅದನ್ನು ಮೆಚ್ಚುವ ಹೃದಯ ವೈಶಾಲ್ಯ ಇವರದ್ದು ಹೇಳಿಕೊಳ್ಳುವ ಪ್ರಚಾರಗಿಟ್ಟ್ಟಿಸಿಕೊಂಡು, ಸ್ವಾರ್ಥ ಸಾಧಿಸುವ ಸ್ವಭಾವ ಇವರಲ್ಲಿ ಇಲ್ಲವೇ ಇಲ್ಲ ವೃತ್ತಿ ಮತ್ತು ಪ್ರವೃತ್ತಿಗೆ ಮಾತೃಸ್ವರ್ಶ ನೀಡುವವರು. ಯಾವುದರಲ್ಲಿ ಅಸಹನೆ, ಸಿನಿಕತನ ತೋರುವವರಲ್ಲ. ಇಂದಲ್ಲದಿದ್ದರೆ ಸರೀ ಆದೀತು ನನ್ನ ಕೆಲಸ ಮಾಡುತ್ತೇನೆ ಎಂಬ ವಿಶಾಲ ಮನೋಭಾವನೆ ಇವರದ್ದು ಭುವನೇಶ್ವರಿ ಹೆಗ್ಗಡೆಯವರು ಒಬ್ಬ ಮಾನವೀಯ ಹೃದಯ ಉಳ್ಳ ಪರಿಪುರ್ಣ ಮಹಿಳೆ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಏನನ್ನಾದರೂ ಸಾಧಿಸಬಹುದು ಎಂದು ತನ್ನ ಕೃತಿಗಳ ಮೂಲಕ ಮಾಡಿ ತೋರಿಸಿದ ಛಲವಾದಿ ಮಹಿಳೆ ಸದಾ ಹಸನ್ಮುಖಿಯಾಗಿ ನಗುನಗುತ್ತಾ ಎಲ್ಲರೊಂದಿಗೆ ಬೆರೆಯುತ್ತ ವಯಸ್ಸು ಆರುವತ್ತಾಗಿದೆ ಎಂಬುದನ್ನು ಮರೆತು ಹದಿಹರೆಯದ ಹುಡುಗಿಯರನ್ನು ನಾಚಿಸುವ ಆತ್ಮವಿಶ್ವಾಸದ ಬದುಕನ್ನು ಬಾಳುವ ಭುವನೇಶ್ವರಿ ಹೆಗಡೆಯವರನ್ನು ಕಂಡಾಗಲೆಲ್ಲಾ ಖ್ಯಾತ ಕವಿ ಸುಬ್ರಾಯ ಚೊಕ್ಕಾಡಿಯವರು ಭು.ಹೆ. ಅವರ ಬಗ್ಗೆ ಬರೆದ ಚುಟುಕು ನೆನಪಾಗುತ್ತದೆ. ಚೊಕ್ಕಾಡಿಯವರು ಹೀಗೆ ಬರೆಯುತ್ತಾರೆ. “ಈ ಭುವನೇಶ್ವರಿ ಹೆಗಡೆಯವರಿಗೆ ಅರುವತ್ತಾಯಿತೆಂದು ಹೇಳಿದವರಾರು, ಅವರಿನ್ನೂ ಷೋಡಷಿಯೇ ಅವರ ಬರಹಗಳಂತೆ” ಅಷ್ಟಕ್ಕೂ ಮಹಿಳೆಗೆ ವಯಸ್ಸು ಕಡಿಮೆಯಾಗುತ್ತದೆಯೇ ಹೊರತು ಹೆಚ್ಚಾಗುವುದಿಲ್ಲವಲ್ಲ!!
ನಮ್ಮ ಹೆಮ್ಮೆಯ ಕರುನಾಡಿನ ಸಮಸ್ತ ಕನ್ನಡಿಗರಿಗೆ ಹೇಗೆ ಭುವನೇಶ್ವರಿ ದೇವಿ ತಾಯಿಯೋ ಹಾಗೆ ಹಾಸ್ಯ ಸಾಹಿತ್ಯದ ಸಾಮ್ರಾಜ್ಯದ ಅನಭಿಷಿಕ್ತ ಮಹಾರಾಣಿ ನಮ್ಮ ಹೆಮ್ಮೆಯ ಭುವನೇಶ್ವರಿ ಹೆಗಡೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಇದೀಗ ವೃತ್ತಿಯಿಂದ ನಿವೃತ್ತಿಯಾಗಿ, ತಮ್ಮ ಪ್ರವೃತ್ತಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಕಾಲಪಥದಲ್ಲಿ ನಿಂತಿರುವ ಭುವನೇಶ್ವರಿ ಹೆಗಡೆ ಅವರಿಗೆ, ಆ ತಾಯಿ ಭುವನೇಶ್ವರಿ ದೇವಿ ಸಕಲ ಸಂಪತ್ತು, ಐಶ್ವರ್ಯವನ್ನು ನೀಡಲಿ ಮತ್ತು ನಮ್ಮೆಲ್ಲರನ್ನು ಮತ್ತಷ್ಟು ನಗಿಸಲು ಇನ್ನಷ್ಟು ಶಕ್ತಿ ನೀಡಲಿ ಹಾಗೂ ಅವರ ನಿವೃತ್ತ ಜೀವನ ಸುಖಮಯವಾಗಿರಲು ಎಂದು ತುಂಬು ಹೃದಯದಿಂದ ಹಾರೈಸೋಣ.

error: Content is protected !!