ಡ್ರಗ್ಸ್ ಹಾವಳಿ ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ ► ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ್

(ನ್ಯೂಸ್ ಕಡಬ) newskadaba.com ಮಂಗಳೂರು, ಅ.02. ದಕ್ಷಿಣಕ್ಕೆ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಡ್ರಗ್ಸ್ ಹಾವಳಿ ಯುವ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿದೆ. ಇದನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅಬಕಾರಿ ಇಲಾಖೆ ಮುಂದಾಗಿದೆ. ಅಬಕಾರಿ ಇಲಾಖೆ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಮಾದಕ ದ್ರವ್ಯಗಳ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಿ ಕಾರ್ಯಾಚರಿಸಲು ಸೂಚಿಸಲಾಗಿದೆ ಎಂದು ರಾಜ್ಯದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ತಿಳಿಸಿದ್ದಾರೆ.

ಅಬಕಾರಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿ ಅಧಿಕಾರಿಗಳ ಜತೆ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡ್ರಗ್ಸ್ ಹಾವಳಿ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನ ಸಮಿತಿಯನ್ನು ಬಲಪಡಿಸಲಾಗುತ್ತಿದೆ. ಈ ಸಮಿತಿಯವರು ಶಾಲಾ ಕಾಲೇಜುಗಳ ಪ್ರಾಂಶುಪಾಲರು, ಆಡಳಿತ ಮಂಡಳಿಯ ಜತೆ ಮಾತುಕತೆ ನಡೆಸಿ, ಮಾದಕ ದ್ರವ್ಯ ವ್ಯಸನಿಗಳಾಗಿರುವ ವಿದ್ಯಾರ್ಥಿಗಳನ್ನು ಅದರಿಂದ ಹೊರಬರುವಂತೆ ಹಾಗೂ ಈ ಜಾಲವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಇಂದಿನ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಅಬಕಾರಿ ಡಿಸಿ ನೇತೃತ್ವದ ಹಿಂದಿನ ಅನುಷ್ಠಾನ ಸಮಿತಿಯು ನಿಷ್ಕ್ರಿಯಗೊಂಡಿರುವುದನ್ನು ಒಪ್ಪಲೇಬೇಕಾಗಿದೆ. ಹಾಗಾಗಿ ಸಮಿತಿಯನ್ನು ಬಲಗೊಳಿಸುವ ಮೂಲಕ ಡ್ರಗ್ಸ್ ನಿಯಂತ್ರಣ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.

Also Read  ಕಾಂಗ್ರೆಸ್ ಆರಂಭಿಕ ಮುನ್ನಡೆ ➤ ಕೆಪಿಸಿಸಿ ಕಚೇರಿ ಎದುರು ಸಂಭ್ರಮಾಚರಣೆ

ಮದ್ಯಪಾನಕ್ಕಿಂತಲೂ ಇದೀಗ ಡ್ರಗ್ಸ್ ಹಾವಳಿ ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂದರು. ಜಿಲ್ಲೆಯಲ್ಲಿ 2016-17ನೆ ಸಾಲಿನಲ್ಲಿ ಐದು ಗಾಂಜಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 25.278 ಕಿ.ಗ್ರಾಂ. ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಮದ್ಯಪಾನ ಸಂಪೂರ್ಣ ನಿಷೇಧದ ಚಿಂತನೆ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪುರ, ಬಹಳ ಹಿಂದಿನಿಂದಲೂ ಮದ್ಯಪಾನ ಜಾರಿಯಲ್ಲಿದೆ. ಅದನ್ನು ನಿಷೇಧಿಸುವುದು ಅಷ್ಟು ಸುಲಭವಲ್ಲ. ಕುಡಿಯುವುರನ್ನು ಕುಡಿಯಬೇಡಿ ಎಂದು ಹೇಳಲೂ ಆಗುವುದಿಲ್ಲ. ಆದರೆ ನಕಲಿ ಮದ್ಯಪಾನದಿಂದ ಆರೋಗ್ಯವನ್ನು ಕೆಡಿಸಿಕೊಳ್ಳುವ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಹೇಳಿದ ಅವರು, ಅಬಕಾರಿ ಇಲಾಖೆ ಗುರಿ ಕೇವಲ ಆದಾಯ ಸಂಗ್ರಹ ಮಾತ್ರವಲ್ಲ, ಬದಲಿಗೆ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನೂ ನಡೆಸಲಾಗುವುದು ಎಂದು ಹೇಳಿದರು.

error: Content is protected !!
Scroll to Top