(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.30. ಸಂಪ್ಯ ಎಸ್.ಐ ವಿರುದ್ಧ ಅವಹೇಳನಕಾರಿ ಹೇಳಿಕೆ ಹಾಗೂ ಸಾರ್ವಜನಿಕ ಬೆದರಿಕೆ ಹಿನ್ನೆಲೆಯಲ್ಲಿ ಬಂಧಿಸಲ್ಪಟ್ಟಿದ್ದ ಹಿಂದೂ ಜಾಗರಣ ವೇದಿಕೆಯ ಮುಖಂಡ ಜಗದೀಶ್ ಕಾರಂತರಿಗೆ ಪುತ್ತೂರು ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 15 ರಂದು ಪುತ್ತೂರಿನಲ್ಲಿ ನಡೆದಿದ್ದ ಪ್ರತಿಭಟನಾ ಸಭೆಯಲ್ಲಿ ಜಗದೀಶ್ ಕಾರಂತ್ ಸಂಪ್ಯ ಠಾಣೆಯ ಎಸ್.ಐ. ಹಾಗೂ ಸಿಬ್ಬಂದಿಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದರು ಮತ್ತು ಸಾರ್ವಜನಿಕ ಬೆದರಿಕೆ ಹಾಕಿದ್ದರು. ಈ ಸಂಬಂಧ ಪುತ್ತೂರು ನಗರ ಪೋಲೀಸರು ಕಾರಂತ್ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಪತ್ತೆ ದಳದ ಪೋಲೀಸರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು. ಮಧ್ಯರಾತ್ರಿ 1.30 ರ ಸುಮಾರಿಗೆ ಪುತ್ತೂರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ಜಗದೀಶ್ ಕಾರಂತರ ಪರ ವಕೀಲರಾದ ಮಹೇಶ್ ಕಜೆ ಬಂಧನದ ಮೊದಲು ಮಾಡಬೇಕಾಗಿದ್ದ ಕಾನೂನು ಪ್ರಕ್ರಿಯೆಗಳನ್ನು ಪೂರೈಸದ ಹಿನ್ನಲೆಯಲ್ಲಿ ಜಾಮೀನು ನೀಡಬೇಕೆಂದು ನ್ಯಾಯಾಧೀಶರನ್ನು ಕೋರಿದ್ದರು. ಅದರಂತೆ ಸೆಕ್ಷನ್ 41 ರ ಅಡಿ ಆರೋಪಿಗೆ ನೋಟೀಸ್ ಜಾರಿ ಮಾಡುವ ಮೊದಲು ಬಂಧನ ನಡೆಸುವ ಮೂಲಕ ಕಾನೂನಿನ ನಿಯಂತ್ರಣ ಮೀರಿ ವರ್ತಿಸಿದ್ದಾರೆ ಎಂದು ನ್ಯಾಯಾಲಯವು ಕಾರಂತರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಮುಂದಿನ ವಿಚಾರಣೆಯನ್ನು ಅಕ್ಟೋಬರ್ 3 ಕೈಗೆತ್ತಿಕೊಂಡಿದೆ.