(ನ್ಯೂಸ್ ಕಡಬ) newskadaba.com ಮಂಗಳೂರು, ಅ. 28. ವಿಶ್ವದಲ್ಲಿ ಶಾಲಾ ಮಕ್ಕಳಿಗಾಗಿ ಒಲಿಂಪಿಯಾಡ್ ಪರೀಕ್ಷೆಗಳನ್ನು ಆಯೋಜಿಸುವ ಅತಿದೊಡ್ಡ ಸಂಸ್ಥೆಯಾದ ಸೈನ್ಸ್ ಒಲಿಂಪಿಯಾಡ್ ಫೌಂಡೇಷನ್ (ಎಸ್‍ಓಎಫ್) ಪ್ರಸಕ್ತ ಶೈಕ್ಷಣಿಕ ವರ್ಷದ (2020-2021) ಒಲಿಂಪಿಯಾಡ್ ಪರೀಕ್ಷೆಗಳನ್ನು ಆನ್ ಲೈನ್ ನಲ್ಲಿ ನಡೆಸುವುದಾಗಿ ಇಂದು ಪ್ರಕಟಿಸಿದೆ. ವಿದ್ಯಾರ್ಥಿಗಳ ಸುರಕ್ಷೆ ಮತ್ತು ಆರೋಗ್ಯ ಕಳಕಳಿಯನ್ನು ಪ್ರಮುಖವಾಗಿ ಪರಿಗಣಿಸಿ, ಈ ಬಾರಿಯ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಮನೆಗಳಿಂದಲೇ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತಿದೆ.
ಎಸ್.ಒ.ಎಫ್ ಈ ಬಾರಿ ನಾಲ್ಕು ಒಲಿಂಪಿಯಾಡ್ ಪರೀಕ್ಷೆಗಳನ್ನು ನಡೆಸುತ್ತದೆ. ಅವುಗಳೆಂದರೆ ಎಸ್.ಒ.ಎಫ್ ಇಂಟರ್ ನ್ಯಾಷನಲ್ ಜನರಲ್ ನಾಲೆಡ್ಜ್ ಒಲಿಂಪಿಯಾಡ್, ಎಸ್.ಓ.ಎಫ್ ಇಂಟರ್ ನ್ಯಾಷನಲ್ ಇಂಗ್ಲಿಷ್ ಒಲಿಂಪಿಯಾಡ್, ಎಸ್.ಓ.ಎಫ್ ನ್ಯಾಷನಲ್ ಸೈನ್ಸ್ ಒಲಿಂಪಿಯಾಡ್ ಮತ್ತು ಎಸ್.ಓ.ಎಫ್ ಇಂಟರ್ ನ್ಯಾಷನಲ್ ಮ್ಯಾಥಮ್ಯಾಟಿಕ್ಸ್ ಒಲಿಂಪಿಯಾಡ್. ಪರೀಕ್ಷೆಗೆ ವಿದ್ಯಾರ್ಥಿಗಳ ನೋಂದಣಿ ಆರಂಭವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆ ನಡೆಯುವ 15 ದಿನ ಮೊದಲು ಹೆಸರು ನೊಂದಾಯಿಸಿಕೊಳ್ಳಬೇಕು. ಪರೀಕ್ಷೆಗಳಿಗೆ ನೋಂದಾಯಿಸಲು ವಿದ್ಯಾರ್ಥಿಗಳು https://ors.sofworld.org/studentregistration ಭೇಟಿ ನೀಡಿ. ಕಳೆದ ವರ್ಷ ರಾಜ್ಯದ ವಿವಿಧ ಶಾಲೆಗಳ ಸುಮಾರು 7 ಲಕ್ಷ ವಿದ್ಯಾರ್ಥಿಗಳು ಒಂದರಿಂದ ಹನ್ನೆರಡನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಒಲಿಂಪಿಯಾಡ್ ಪರೀಕ್ಷೆಗಳಲ್ಲಿ ಭಾಗವಹಿಸಿದ್ದರು. 2019-20ರಲ್ಲಿ 32 ದೇಶಗಳ 56 ಸಾವಿರಕ್ಕೂ ಅಧಿಕ ಶಾಲೆಗಳ ವಿದ್ಯಾರ್ಥಿಗಳು ಆರು ಒಲಿಂಪಿಯಾಡ್ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರು. ಹತ್ತು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪರೀಕ್ಷೆಗಳ ವೇಳಾಪಟ್ಟಿ ಇಂತಿದೆ:- ನವೆಂಬರ್ 7-8, ನವೆಂಬರ್ 21-22 ಮತ್ತು ಡಿಸೆಂಬರ್ 5-6 ರಂದು ಇಂಟರ್ ನ್ಯಾಷನಲ್ ಜನರಲ್ ನಾಲ್ಡೆಜ್ ಒಲಿಂಪಿಯಾಡ್ ಪರೀಕ್ಷೆಗಳು ನಡೆಯಲಿವೆ. ನವೆಂಬರ್ 14-15, ನವೆಂಬರ್ 28-29 ಮತ್ತು ಡಿಸೆಂಬರ್ 12-13 ರಂದು ಇಂಟರ್ ನ್ಯಾಷನಲ್ ಇಂಗ್ಲೀಷ್ ಒಲಿಂಪಿಯಾಡ್ ಪರೀಕ್ಷೆಗಳು ಜರುಗಲಿವೆ. ಡಿಸೆಂಬರ್ 19-20, ಜನವರಿ 9-10 ಮತ್ತು ಜನವರಿ 30-31ರವರೆಗೂ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್ ಮತ್ತು ಡಿಸೆಂಬರ್ 26-27, ಜನವರಿ 2-3 ಮತ್ತು ಜನವರಿ 23-24 ರಂದು ಇಂಟರ್ ನ್ಯಾಷನಲ್ ಗಣಿತಶಾಸ್ತ್ರ ಒಲಿಂಪಿಯಾಡ್ ಪರೀಕ್ಷೆಗಳು ನಡೆಯಲಿವೆ.