(ನ್ಯೂಸ್ ಕಡಬ) newskadaba.com ಪುತ್ತೂರು, ಸೆ.28. ಸಂಪ್ಯ ಠಾಣಾ ಸಬ್ ಇನ್ಸ್ಪೆಕ್ಟರ್ ಅಬ್ದುಲ್ ಖಾದರ್ ರವರಿಗೆ ಅದೇ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಸತೀಶ್ ಹಲ್ಲೆ ನಡೆಸಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದೊಂದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು, ಇಂತಹ ಘಟನೆಯೇ ನಡದಿರುವುದಿಲ್ಲ ಎಂದು ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.
ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ಐ ಮತ್ತು ಪೊಲೀಸ್ ಪೇದೆ ನಡುವೆ ಹೊಡೆದಾಟ ನಡೆದಿದೆಯೆಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಅಂತರ್ಜಾಲ ಸುದ್ದಿ ಜಾಲತಾಣಗಳಲ್ಲಿ ವರದಿಯಾಗಿತ್ತು. ಈ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ಹಾಗೂ ಪುತ್ತೂರು ವಿಭಾಗದ ಡಿವೈಎಸ್ಪಿ ಶ್ರೀನಿವಾಸ್, ಸತೀಶ್‍ರವರಿಗೆ ಕೆಲದಿನಗಳ ಹಿಂದೆಯೇ ಧರ್ಮಸ್ಥಳ ಠಾಣೆಗೆ ವರ್ಗಾವಣೆಯಾಗಿತ್ತು. ಇಂತಹ ಸುಳ್ಳು ಸುದ್ದಿಗಳನ್ನು ಯಾರೂ ಹರಡಬಾರದು ಎಂದು ಹೇಳಿದ್ದಾರೆ. ಈ ಬಗ್ಗೆ ‘ನ್ಯೂಸ್ ಕಡಬ’ದೊಂದಿಗೆ ಮಾತನಾಡಿರುವ ಸಂಪ್ಯ ಠಾಣಾ ಎಸ್ಐ ಅಬ್ದುಲ್ ಖಾದರ್, ನನ್ನ ಹಾಗೂ ಸತೀಶ್ ಮಧ್ಯೆ ಅಂತಹ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇಂತಹ ಸುಳ್ಳು ಸುದ್ದಿ ನನ್ನ ತೇಜೋವಧೆ ಮಾಡಲು ಯಾರೋ ಕಿಡಿಗೇಡಿಗಳು ಹೆಣೆದ ಷಡ್ಯಂತ್ರವಾಗಿದೆ. ಇಂತಹ ಸುಳ್ಳು ಸುದ್ದಿಗಳನ್ನು ಹರಡುವುದು ಅಪರಾಧವಾಗಿದೆ. ಕೃತ್ಯವನ್ನು ಯಾರು ಮಾಡಿದ್ದಾರೆನ್ನುವ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ ಎಂದರು.