(ನ್ಯೂಸ್ ಕಡಬ) newskadaba.com ಮಂಗಳೂರು, ಅ. 24. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೊರರಾಜ್ಯ ಮತ್ತು ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಅನೇಕ ಆರೋಪಗಳು ಕೇಳಿಬರುತ್ತಿದ್ದು, ಇನ್ನು ಮುಂದೆ ಇಲ್ಲಿ ಕಾರ್ಯನಿರ್ವಹಿಸುತ್ತಿರುವ 20 ಬೀಫ್ ಸ್ಟಾಲ್ ಗಳಲ್ಲಿ ಇತರ ರಾಜ್ಯ ಹಾಗೂ ಜಿಲ್ಲೆಗಳಿಂದ ಮಾಂಸ ತಂದು ಮಾರಾಟ ಮಾಡದಂತೆ ಸಂಬಂಧಿಸಿದ ಮಾಲಕರು ಕಠಿಣ ಕ್ರಮ ಕೈಗೊಳ್ಳಬೇಕು.
ಅನಧಿಕೃತವಾಗಿ ಮಾರಾಟ ಮಾಡುವುದು ಕಂಡುಬಂದಲ್ಲಿ ಸ್ಟಾಲಿ ನ ಪರವಾನಿಗೆಯನ್ನು ರದ್ದುಪಡಿಸಲಾಗುತ್ತದೆ ಹಾಗೂ ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮಾರಾಟಗಾರರು ಇನ್ನು ಮುಂದೆ ಪಾಲಿಕೆಯ ಅಧೀನದಲ್ಲಿರುವ ಅಧಿಕೃತ ಕಸಾಯಿಖಾನೆಯಿಂದಲೇ ಮಾಂಸವನ್ನು ಪಡೆದು ಮಾರಾಟ ಮಾಡಬೇಕು. ಎಲ್ಲಾ ಬೀಫ್ ಸ್ಟಾಲ್ ಮಾಲಕರು ತಮ್ಮ ತಮ್ಮ ಅಂಗಡಿಗಳಲ್ಲಿ ಮಾರಾಟ ಮಾಡಲು ಮಾಂಸವನ್ನು ಪಡೆದ ವಿವರದ ರಶೀದಿಯನ್ನು ಕಡ್ಡಾಯವಾಗಿ ಇರಿಸಬೇಕು. ಕಸಾಯಿಖಾನೆಗೆ ಮಾಂಸಕ್ಕಾಗಿ ಜಾನುವಾರುಗಳನ್ನು ಕೊಂಡೊಯ್ಯುವಾಗ ಆರ್.ಟಿ.ಒ ದಿಂದ ಅಧಿಕೃತವಾಗಿ ನೋಂದಣಿಗೊಂಡ ಸ್ಪೆಷಲ್ ಪರ್ಮಿಶನ್ ವೈಕಲ್ ನಲ್ಲೇ ಸಾಗಿಸುವಂತೆ ಸಂಬಂಧಿತ ಕಸಾಯಿಖಾನೆ ಮಾಲಕರು ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ಮಹಾನಗರ ಪಾಲಿಕೆಕೆಯ ಮಹಾಪೌರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.