(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.26. ತಂಡವೊಂದು ನಡೆಸಿದ ತಲವಾರು ದಾಳಿಯಲ್ಲಿ ಇಬ್ಬರು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡ ಘಟನೆ ಫರಂಗಿಪೇಟೆಯ ಪೊಲೀಸ್ ಹೊರ ಠಾಣೆಯ ಎದುರಿನ ರಿಕ್ಷಾ ನಿಲ್ದಾಣದ ಬಳಿ ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.
ಮೃತರನ್ನು ಅಡ್ಯಾರ್-ಕಣ್ಣೂರು ನಿವಾಸಿ ಫಯಾಝ್ ಹಾಗೂ ಝಿಯಾ ಎಂದು ಗುರುತಿಸಲಾಗಿದೆ. ಮಂಗಳೂರು ಹೊರವಲಯದ ಅಡ್ಯಾರ್ ನಿವಾಸಿ ಹನೀಸ್, ಮುಸ್ತಫಾ ಹಾಗೂ ನಜ್ಮಾನ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ವಿಫ್ಟ್ ಕಾರಿನಲ್ಲಿದ್ದ ಈ ಐವರ ಮೇಲೆ ಪಿಕಪ್‌ನಲ್ಲಿ ಬಂದ ತಂಡ ಏಕಾಏಕಿ ತಲವಾರು ದಾಳಿ ನಡೆಸಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಫಯಾಝ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಝಿಯಾ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟರೆನ್ನಲಾಗಿದೆ. ಕೃತ್ಯದ ಬಳಿಕ ತಂಡವು ಇನ್ನೋವಾ ಕಾರಿನಲ್ಲಿ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಸ್ಥಳೀಯ ರೌಡಿಗಳ ತಂಡ ಕೃತ್ಯವೆಸಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡುಬಂದಿದ್ದು, ಪೊಲೀಸರ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೇಂದ್ರೀಕರಿಸಿದ್ದಾರೆ.