(ನ್ಯೂಸ್ ಕಡಬ) newskadaba.com ಕೊಡಗು ಅ. 17: ಕೊಡವರ ಕುಲದೇವತೆ, ಮಾತೆ ಕಾವೇರಿ, ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದ್ದಾಳೆ. ಇಂದು (ಶನಿವಾರ) ಬೆಳಗ್ಗೆ ಕನ್ಯಾ ಲಗ್ನದಲ್ಲಿ 7 ಗಂಟೆ 04 ನಿಮಿಷಕ್ಕೆ ಬ್ರಹ್ಮಗಿರಿ ತಪ್ಪಲಿನ ಪವಿತ್ರ ತಾಣದಲ್ಲಿ ತೀಥ೯ ಸ್ವರೂಪಿಣಿಯಾಗಿ ಮಾತೆ ಕಾವೇರಿ ದರ್ಶನ ನೀಡಿದ್ದಾಳೆ.
ಬ್ರಹ್ಮಕುಂಡಿಕೆಯ ಬಳಿ ಗೋಪಾಲ್ ಕೃಷ್ಣ ಆಚಾರ್ ನೃತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯ ನೆರವೇರಿದ್ದು, ಬ್ರಹ್ಮ ಕುಂಡಿಕೆ, ಅಗಸ್ತೇಶ್ವರ ದೇವಾಲಯ ಮತ್ತು ಭಾಗಮಂಡಲ ದೇವಾಲಯಗಳಿಗೆ ವಿದ್ಯುತ್ ದೀಪ ಮತ್ತು ಪುಷ್ಪಾಲಂಕಾರ ಮಾಡಲಾಗಿದೆ. ಈ ಬಾರಿ ಕೊರೊನಾ ಹಿನ್ನೆಲೆ ತಲಕಾವೇರಿ ಕ್ಷೇತ್ರದಲ್ಲಿ ಕೇವಲ 500-600 ಭಕ್ತರಿಂದ ಮಾತ್ರ ಕಾವೇರಿ ತೀರ್ಥೋದ್ಭವ ದಶ೯ನಕ್ಕೆ ಅವಕಾಶ ನೀಡಲಾಗಿತ್ತು.ಕೊರೊನಾ ಸೋಂಕು ಹಿನ್ನಲೆ ತೀರ್ಥೋದ್ಭವ ಜಾತ್ರೆಗೆ ಹೆಚ್ಚಿನ ಜನರು ಸೇರದಂತೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಇನ್ನು ತೀರ್ಥ ಪಡೆದುಕೊಳ್ಳಲು ನೂಕುನುಗ್ಗಲು ಆಗದಂತೆ ಕೊಳದ ಸುತ್ತಮುತ್ತ ಬ್ಯಾರಿಕೇಡ್ ಅಳವಡಿಸಲಾಗಿದೆ.