(ನ್ಯೂಸ್ ಕಡಬ) newskadaba.com ಕಡಬ ಅ. 13: ಮಕ್ಕಳನ್ನ ಶಾಲೆಯತ್ತ ಸೆಳೆಯಲು ಒಂದಲ್ಲಾ ಒಂದು ರೀತಿಯಲ್ಲಿ ಕಸರತ್ತುಗಳನ್ನ ಮಾಡುತ್ತಲೇ ಇರಬೇಕಾಗುತ್ತದೆ. ಮಕ್ಕಳನ್ನ ಶಾಲೆಯತ್ತ ಮುಖ ತಿರುಗಿಸುವುದು ಅಷ್ಟು ಸುಲಭದ ಮಾತಲ್ಲ. ಇಲ್ಲೊಂದು ಸರ್ಕಾರಿ ಶಾಲೆಯ ಗೋಡೆಗೆ ರೈಲು ಬೋಗಿಯ ಮಾದರಿಯ ಬಣ್ಣ ಬಳಿದು ಆಕರ್ಷಕ ರೀತಿಯಲ್ಲಿ ಶಾಲೆಯನ್ನು ಬದಲಾಯಿಸಲಾಗಿದೆ.
ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಮೀನಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಭಾರತೀಯ ರೈಲು ಬೋಗಿಯಾಗಿ ಬದಲಾಗಿದೆ.ಶಾಲಾ ಗೋಡೆಗೆ ಭಾರತೀಯ ರೈಲು ಬೋಗಿಯ ಮಾದರಿ ಬಣ್ಣ ಬಳಿಯ ಲಾಗಿದೆ. ಅದಕ್ಕೆ “ಮೀನಾಡಿ ಎಕ್ಸ್‌ಪ್ರೆಸ್’ ಎಂದು ಹೆಸರಿಡಲಾಗಿದ್ದು, ಎಂಜಿನ್‌ನಲ್ಲಿ ಎಜುಕೇಶನ್ ಎಕ್ಸ್‌ಪ್ರೆಸ್ ಎಂದು ಬರೆಯಲಾಗಿದೆ. ಜತೆಗೆ ಒಂದೊಂದು ಬೋಗಿಗೆ ತರಗತಿಯ ಸಂಖ್ಯೆ ಹಾಕಲಾಗಿದೆ.
ಶಾಲೆಯ ಡಿಐಎಸ್‌ಇ ಕೋಡ್‌ನ್ನು ಕೂಡ ಬರೆಯಲಾಗಿದೆ. ಒಂದು ಬದಿಯಿಂದ ರೈಲು ಎಂಜಿನ್ ಪ್ರಾರಂಭಗೊಂಡು, ಬೋಗಿಗಳು, ಕಿಟಕಿಗಳು ಸೇರಿದಂತೆ ರೈಲು ಬೋಗಿಯ ಮಾದರಿಯಲ್ಲಿಯೇ ಚಿತ್ರ ಬರೆದು ಬಣ್ಣ ಬಳಿಯಲಾಗಿದ್ದು, ಇದೀಗ ಶಾಲೆಯು ರೈಲು ಬೋಗಿಯಂತೆ ಕಂಗೊಳಿಸುತ್ತಿದೆ. ಕಡಬದ ಲಕ್ಷ್ಮೀ ಆರ್ಟ್ಸ್ನ ಲಕ್ಷ್ಮೀಶ ಹಾಗೂ ಮಾಧವ ಎಂಬವರ ಕೈಚಳಕದಿಂದ ಮೀನಾಡಿ ಎಕ್ಸ್‌ಪ್ರೆಸ್ಸ್ ಮೂಡಿ ಬಂದಿದೆ.