ಹೊಸಮಠ ಪ್ರಾ.ಕೃ.ಪ. ಸಹಕಾರಿ ಸಂಘದ ಮಹಾಸಭೆ ► ಹಿಂದಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ಅವ್ಯವಹಾರ ಬಯಲಿಗೆ

(ನ್ಯೂಸ್ ಕಡಬ) newskadaba.com ಕಡಬ, ಸೆ.24. ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಹಿಂದೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಶಿವರಾಮ ಪಿ.ಬಿ ಎಂಬವರು ನಡೆಸಿದರೆನ್ನಲಾದ ಅವ್ಯವಹಾರ ಸಾಬೀತಾಗಿದ್ದು, ಅವರು ನಡೆಸಿದ ಅವ್ಯವಹಾರ ಆದ ನಷ್ಟ ಹಾಗೂ ದಂಡನೆ ವಿಧಿಸಿ ಅವರಿಗೆ ವಸೂಲಿ ಮಾಡಿಕೊಳ್ಳಲಾಗಿರುವ ವಿಚಾರವನ್ನು ಸಭೆಗೆ ತಿಳಿಸಲಾಗಿದ್ದು ಈ ಬಗ್ಗೆ ಚರ್ಚೆ ನಡೆದ ಘಟನೆ ನಡೆಯಿತು. 2016-17ನೇ ಸಾಲಿನಲ್ಲಿ ಸಂಘವು 37.21.626 ಲಾಭ ಗಳಿಸಿದ್ದು ಸದಸ್ಯರಿಗೆ ಶೇ.10 ಡಿವಿಡೆಂಡ್ ಘೋಷಣೆ ಮಾಡಲಾಗಿದ್ದು, ಸಂಘವು ಎ ಗ್ರೇಡ್ ಪಡೆದುಕೊಂಡಿದೆ.


ಸಂಘದ ವಾರ್ಷಿಕ ಮಹಾ ಸಭೆಯು ಸೆ.19ರಂದು ಕುಟ್ರುಪಾಡಿ ಉ.ಹಿ.ಪ್ರಾ,ಶಾಲೆಯಲ್ಲಿ ಸಂಘದ ಅಧ್ಯಕ್ಷ ಎನ್.ಕರುಣಾಕರ ಗೋಗಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ವರದಿ ವರ್ಷದಲ್ಲಿ ಸಂಘವು ರೂ.5.31ಕೋಟಿ ಠೇವಣಿ ಹೊಂದಿದ್ದು, ಪಾಲು ಬಂಡಾವಾಳದಲ್ಲಿ ರೂ.2.39 ಕೋಟಿಗಳಾಗಿದ್ದು ರೂ.17.35 ಕೋಟಿ ಸಾಲ ನೀಡಿ, ವರ್ಷಾಂತ್ಯಕ್ಕೆ ಶೇಖಡಾ 37.27 ಲಕ್ಷ ಲಾಭ ಗಳಿಸಿ ಅದ್ವಿತೀಯ ದಾಖಲೆ ನಿರ್ಮಿಸಿದೆ, ವ್ಯಾಪಾರ ವಹಿವಾಟಿನಲ್ಲಿ ರೂ.6.90 ಲಕ್ಷ ಲಾಭ ಗಳಿಸಿದೆ. ಸಂಘ ತಮ್ಮ ಸದಸ್ಯರಿಂದ ಪಡೆದುಕೊಂಡ ಪಾಲು ಹಣ 2,03,27,310 ವರದಿ ವರ್ಷದ ಆರಂಭದಲ್ಲಿದ್ದು, ವರದಿ ವರ್ಷದಲ್ಲಿ ರೂ.3918430 ಜಮೆ ಆಗಿ ರೂ.334400 ಪಾಲು ಹಣ ವಾಪಾಸು ಪಾವತಿಯಾಗಿದೆ, ವರ್ಷಾಂತ್ಯಕ್ಕೆ 2.50 ಕೋಟಿ ಗುರಿಯಾಗಿದ್ದು ಒಟ್ಟು 23911340 ಜಮೆಯಾಗಿದೆ. ಸದಸ್ಯರ ಅವಶ್ಯಕತೆಗಳನ್ನು ಪುರೈಸಲು ಜಿಲ್ಲಾ ಕೇಂದ್ರ ಬ್ಯಾಂಕಿನಿಂದ ವರದಿ ವರ್ಷದ ಆರಂಭದಲ್ಲಿ ಸಲ್ಲತಕ್ಕ ಸಾಲ ರೂ.147126418 ಇದ್ದು ರೂ.106931000 ಸಾಲವಾಗಿ ಪಡೆಯಲಾಗಿದೆ, ರೂ.173588361ನ್ನು ಮರುಪಾವತಿಸಿ ರೂ.164923112 ಡಿಸಿಸಿ ಬ್ಯಾಂಕಿಗೆ ವರದಿ ವರ್ಷದಲ್ಲಿ ಬಾಕಿ ಇದ್ದು, ಯಾವುದೇ ವಾಯಿದೆ ದಾಟಿದ ಸಾಲಗಳಿಲ್ಲ ಎಂದು ಸಭೆಗೆ ಮಾಹಿತಿ ನೀಡಲಾಯಿತು. ಸಭೆಯಲ್ಲಿ ಸಂಘದ ಅಧ್ಯಕ್ಷ ಎನ್. ಕರುಣಾಕರ ಗೋಗಟೆಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಉಪಾದ್ಯಕ್ಷ ಶಿವಪ್ರಸಾದ್.ಪಿ.ವಿ, ಡಿಸಿಸಿ ಬ್ಯಾಂಕಿನ ಪ್ರತಿನಿಧಿ ಸಂತೋಷ್ ಕುಮಾರ್, ನಿರ್ಧೇಶಕರಾದ ಶಶಾಂಕ ಗೋಖಲೆ, ನೀಲಯ್ಯ ಬನಾರಿ, ಜಯಚಂದ್ರ ರೈ.ಕೆ, ಪದ್ಮಯ್ಯ ಪುಜಾರಿ, ಸೀತಮ್ಮ, ಧರ್ಮಾವತಿ, ಕೃಷ್ಣಪ್ಪ ದೇವಾಡಿಗ, ಮೋಹನ ಗೌಡ ಡಿ.ಬಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸೋಮಸುಂದರ ಶೆಟ್ಟಿ ಎಂ.ಕೆ ವರದಿ ಮಂಡಿಸಿ, ಲೆಕ್ಕಪತ್ರ ವಾಚಿಸಿದರು.

ಸುಸ್ತಿದಾರ ಸದಸ್ಯರಿಗೆ ಮಹಾಸಭೆಯಲ್ಲಿ ಪ್ರಶ್ನೆ ಕೇಳುವ ಹಕ್ಕಿಲ್ಲ:
ಸಭೆಯಲ್ಲಿ ವರದಿ ಮಂಡನೆಯಾದ ಬಳಿಕ ಮಾತನಾಡಿದ ಸದಸ್ಯ ಮ್ಯಾಥ್ಯೂ ಟಿ.ಎಂ. ಅವರು ನಾನು ಹಿಂದಿನ ಮಹಾಸಭೆಯಲ್ಲಿ ಪ್ರಶ್ನೆ ಕೇಳಿದ್ದೆ, ಹಿಂದಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರ ಅವ್ಯವಹಾರ ವಿಚಾರ ಏನಾಯಿತು, ಕಳೆದ ಮಹಾಸಭೆಯಲ್ಲಿ ಉತ್ತರ ಸಿಗಲಿಲ್ಲ, ಆ ವಿಚಾರ ಏನಾಯಿತು ಎಂದು ಪ್ರಶ್ನಿಸಿದರು. ಈ ಬಗ್ಗೆ ಸಂಘದ ಅಧ್ಯಕ್ಷ ಎನ್.ಕರುಣಾಕರ ಗೋಗಟೆಯವರು ಮಾತನಾಡಿ, ನಿಮ್ಮ ಪ್ರಶ್ನೆ ಸರಿಯಾದುದೆ ಆದರೆ ಸುಸ್ತಿದಾರರಾದ ನಿಮಗೆ ಈ ಮಹಾಸಭೆಯಲ್ಲಿ ಪ್ರಶ್ನೆ ಕೇಳುವ ಹಕ್ಕಿಲ್ಲ ಎಂದಾಗ ಮ್ಯಾಥ್ಯೂರವರು ಸುಮ್ಮನಾದರು, ಸ್ವಲ್ಪ ಸಮಯದ ಬಳಿಕ ಬಂದ ಸಂಘದ ಸದಸ್ಯ ವಿಕ್ಟರ್ ಮಾರ್ಟಿಸ್ರವರು ಸಭಾ ವೇದಿಕೆಯ ಹೊರಗೆ ನಿಂತುಕೊಂಡೆ ಮಾತನಾಡಿ, ನಾನು ಕಳೆದ ಮಹಾಸಭೆಯಲ್ಲಿ ಹಿಂದಿನ ಮುಖ್ಯ ಕಾಯನಿರ್ವಾಹಣಾಧಿಕಾರಿಯವರ ಬಗ್ಗೆ ಪ್ರಶ್ನೆ ಮಾಡಿದ್ದೆ ಆದರೆ ಉತ್ತರ ಸಿಗಲಿಲ್ಲ ಎಂದಾಗ ಅಧ್ಯಕ್ಷರು ಅವರನ್ನು ದಯವಿಟ್ಟು ನಿಮಗೆ ಮಹಾಸಭೆಯಲ್ಲಿ ಪ್ರಶ್ನೆ ಮಾಡುವ ಹಕ್ಕು ಇಲ್ಲ, ನೀವು ಬೇಕಾದರೆ ಸಭೆಯಲ್ಲಿ ಕುಳಿತುಕೊಳ್ಳಬಹುದು ಎಂದು ಹೇಳಿದಾಗ, ವಿಕ್ಟರ್ ಮಾರ್ಟಿಸ್ರವರು ಮಾತನಾಡಿ ಸರಕಾರ ರೈತರ ಸಾಲದ ಅವಧಿಯನ್ನು ವಿಸ್ತರಣೆ ಮಾಡಿದೆ, ಆದರೂ ನಾನು ಹೇಗೆ ಸುಸ್ತಿದಾರನಾಗುವುದು ಎಂಬ ವಿಚಾರದ ಬಗ್ಗೆ ಬಹಳ ಹೊತ್ತು ಚರ್ಚೆ ನಡೆಸಿದರು, ಬಳಿಕ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಸಂತೋಷ್ ಕುಮಾರ್ ಸಾಲದ ಅವಧಿ ವಿಸ್ತರಣೆ ಬಗ್ಗೆ ವಿವರಣೆ ನೀಡಿ, ಸರಕಾರ ಸುಸ್ತಿದಾರರಿಗೆ ಅವಧಿ ವಿಸ್ತರಣೆ ಮಾಡಿರುವುದು ಅವರ ಅನುಕೂಲಕ್ಕಾಗಿ ಆದರೆ ಅವರು ಸುಸ್ತಿದಾರರಾಗಿಯೇ ಇರುತ್ತಾರೆ ಎಂದು ಹೇಳಿದರು, ಬಳಿಕ ಇದನ್ನು ಒಪ್ಪಿಕೊಂಡ ವಿಕ್ಟರ್ ಮಾರ್ಟಿಸ್ ಅಲ್ಲಿಂದ ತೆರಳಿದರು.

Also Read  ಗುರುವಾಯನಕೆರೆ : ಬೊಲೆರೋ -ಜಿಪ್ಸಿ ನಡುವೆ ಭೀಕರ ಅಪಘಾತ

ಹಿಂದಿನ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿಯವರ ಅವ್ಯವಹಾರ ಪ್ರಕರಣ ಸಾಬೀತು-ಸಭೆಗೆ ವಿವರಣೆ
ಸಹಕಾರಿ ಸಂಘದಲ್ಲಿ ವಿವಾದ ಎಬ್ಬಿಸಿದ ಹಿಂದಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರು ನಡೆಸಿದ ಅವ್ಯವಹಾರ ಪ್ರಕರಣದ ಬಗ್ಗೆ ಸಭೆಗೆ ವಿವರಣೆ ನೀಡುತ್ತಾ ಮಾತನಾಡಿ, ನಮ್ಮ ಸಂಘದಲ್ಲಿ ಹಿಂದೆ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿಯಾಗಿದ್ದ ಶಿವರಾಮ್ ಪಿಬಿಯವರ ವಿರುದ್ದ ಕೆಲವೊಂದು ಅವ್ಯವಹಾರದ ಆರೋಪ ಬಂದಿತ್ತು, ಬಳಿಕ ಅದನ್ನು ತನಿಖೆ ಮಾಡಲು ನಿರ್ಣಯಿಸಿ ಅವರ ರಾಜಿನಾಮೆಯನ್ನು ಪಡೆಯಲಾಗಿತ್ತು, ಆದರೆ ಈ ವಿಷಯದ ಬಗ್ಗೆ ಕಳೆದ ಮಹಾಸಭೆಯಲ್ಲಿ ಸದಸ್ಯರು ಪ್ರಶ್ನೆ ಮಾಡಿದ್ದರು, ನಮಗೆ ಆ ಸಂಧರ್ಭದಲ್ಲಿ ತನಿಖೆ ಪುರ್ತಿಯಾಗದ ಹಿನ್ನಲೆಯಲ್ಲಿ ಆ ಬಗ್ಗೆ ಸದಸ್ಯರಿಗೆ ವಿವರಣೆಯನ್ನು ನೀಡಲು ಕಷ್ಟವಾಗಿತ್ತು, ಮುಂದಿನ ಮಹಾಸಭೆಯಲ್ಲಿ ತಿಳಿಸುತ್ತೇನೆ ಎಂದು ಹೇಳಿದ್ದೆ ಅದರಂತೆ ಈ ಬಾರಿ ನಾವು ಆ ಬಗ್ಗೆ ವಿವರಣೆ ನೀಡುತ್ತೇನೆ ಎಂದು ಹೇಳಿ ಆರೋಪ ಸಾಬೀತಾಗಿರುವ ವರದಿಯನ್ನು ಸಭೆಯಲ್ಲಿ ಓದುವಂತೆ ಸೂಚಿಸಿದರು. ಈ ಅವ್ಯವಹಾರದ ತನಿಖೆಯನ್ನು ಲೆಕ್ಕಪರಿಶೋಧಕ ಗಣೇಶ್ ಜೋಷಿಯವರು ನಡೆಸಿದ್ದು ಅವರು ಡಿ.19ರಂದು ವರದಿಯನ್ನು ನೀಡಿದ್ದಾರೆ. ಆ ವರದಿಯಲ್ಲಿ ತಿಳಿಸಿದಂತೆ ಶಿವರಾಮ ಪುಜಾರಿ.ಬಿಯವರು ಕರ್ತವ್ಯ ಲೋಪ ಮತ್ತು ಅವ್ಯವಹಾರ ಮಾಡಿರುವುದು ಸಾಬೀತಾಗಿದ್ದು ಅದನ್ನು ಅವರು ಒಪ್ಪಿಕೊಂಡಿದ್ದಾರೆ, ಇವರ ಅವ್ಯವಹಾರದ ಪರಿಣಾಮವಾಗಿ ಸಹಕಾರಿ ಸಂಘಕ್ಕೆ ರೂ.3,57,385 ರೂ. ನಷ್ಟವಾಗಿದ್ದು ಈ ಹಣವನ್ನು ಅವರಿಂದ ವಸೂಲು ಮಾಡಲಾಗಿದೆ ಎಂಬ ವಿಷಯವನ್ನು ವರದಿ ಮೂಲಕ ಓದಿ ಸಭೆಗೆ ತಿಳಿಸಲಾಯಿತು. ಬಳಿಕ ಮಾತನಾಡಿದ ಅಧ್ಯಕ್ಷರು ಹಿಂದಿನ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿಯವರು ಅವ್ಯವಹಾರದ ಬಗ್ಗೆ ತಪ್ಪೋಪ್ಪಿಕೊಂಡು ಅವ್ಯವಹಾರ ನಡೆಸಿದ ಹಣವನ್ನು ಪಾವತಿಸಿದ್ದಾರೆ, ಆದರೆ ಅವರು ಸಂಘಕ್ಕೆ ನೇಮಕಗೊಳ್ಳುವ ಸಂದರ್ಭದಲ್ಲಿ ಒಂದು ಲಕ್ಷ ಠೇವಣಿಯನ್ನು ಇಟ್ಟಿದ್ದು ಮತ್ತು ಅವರಿಗೆ ಸಿಗಬೇಕಾದ ಬೋನಸ್, ಪಿ.ಎಪ್ಗಳನ್ನು ನೀಡುವಂತೆ ಅವರು ಸಂಘಕ್ಕೆ ಮನವಿ ಮಾಡಿಕೊಂಡಿದ್ದಾರೆ ಈ ಹಣವನ್ನು ಅವರಿಗೆ ನೀಡುವ ಬಗ್ಗೆ ಮಹಾಸಭೆಯಲ್ಲಿ ನಿರ್ಣಯವಾಗಬೇಕು ಎಂದು ಹೇಳಿದರು. ಈ ಬಗ್ಗೆ ಅಬಿಪ್ರಾಯ ವ್ಯಕ್ತಪಡಿಸಿದ ಸಂಘದ ಸದಸ್ಯೆ ಪುಲಸ್ಯ ರ್ಯೆಯವರು ಶಿವರಾಮರವರ ಮೇಲೆ ಸಂಘದ ಸದಸ್ಯರು ವಿಶ್ವಾಸವನ್ನು ಇಟ್ಟುಕೊಂಡು ಅವರನ್ನು ನೇಮಕ ಮಾಡಿಕೊಂಡಿದ್ದಾರೆ. ನನ್ನ ಅಭಿಪ್ರಾಯದಲ್ಲಿ ಅವರಿಗೆ ಯವುದೇ ಸೌಲಭ್ಯವನ್ನು ನೀಡುವುದು ಬೇಡ ಯಾಕೆಂದರೆ ಅವರು ಮಾಡಿರುವ ಅವ್ಯವಹಾರ ಇಷ್ಟೆ ಅಲ್ಲ ಸದಸ್ಯರಿಗೆ ತುಂಬಾ ನಷ್ಟವಾಗಿದೆ, ಆದರೆ ಅದು ತನಿಖೆಯ ವೇಳೆ ದಾಖಲೆಯ ಆಧಾರದಲ್ಲಿ ಸಾಬೀತಾಗಿಲ್ಲ ಅಷ್ಟೆ, ಕೆಲವು ನಗದು ವೋಚರ್ಗಳಿಗೆ ಸದಸ್ಯರಿಂದ ಅವರಿಗೆ ವಿಚಾರ ಗೊತ್ತಿಲ್ಲದೆ ಸಹಿ ಪಡೆದುಕೊಂಡು ಮಾಡಿರುವುದರಿಂದ ಅಂತಹ ಪ್ರಕರಣಗಳು ಸಾಬೀತಾಗಿಲ್ಲ ಎಂದು ಹೇಳಿದರು. ಸದಸ್ಯ ಧನಂಜಯ ಕೊಡಂಗೆಯವರು ಮಾತನಾಡಿ ಹಿಂದಿನ ಕಾರ್ಯದರ್ಶಿಯವರಿಂದ ನಾವು ನಷ್ಟ ಮತ್ತು ಅದಕ್ಕೆ ದಂಡನೆ ಹಾಕಿ ವಸೂಲು ಮಾಡಿಕೊಂಡಿದ್ದೆವೆ, ಆದರೆ ಈ ಬಗ್ಗೆ ಕಾನೂನಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಅವರಿಗೆ ನೀಡಬೇಕಾದ ಹಣವನ್ನು ನೀಡುವ ಬಗ್ಗೆ ನಿರ್ಧರಿಸಿ ಎಂದು ಹೇಳಿದರು. ಕಿರಣ್ ಗೋಗಟೆಯವರು ಮಾತನಾಡಿ, ಅವರಿಗೆ ನೀಡಬೇಕಾದ ಸೌಲಭ್ಯವನ್ನು ನೀಡಬೇಕೆಂದಿಲ್ಲ ಇದರಿಂದ ಅವ್ಯವಹಾರ ಮಾಡುವವರಿಗೆ ಪಾಠವಾಗಬೇಕು ಎಂಬ ಅಭಿವ್ರಾಯ ವ್ಯಕ್ತಪಡಿಸಿದರೆ, ಕೊರಗಪ್ಪ ಗೌಡ, ಎಲ್ಸಿ ತೋಮಸ್, ಶಂಕರ ಭಟ್ ಮೊದಲಾದವರು ಕಾನೂನು ಅಂಶಗಳನ್ನು ತಿಳಿದುಕೊಂಡು ವ್ಯವಹಾರ ಮಾಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಇತರ ಸದಸ್ಯರು ಕೂಡ ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಶಿವರಾಮ ಪಿಬಿಯವರಿಗೆ ಸಂಘದಿಂದ ನೀಡಬೇಕಾದ ಹಣವನ್ನು ನೀಡುವ ಬಗ್ಗೆ ನಿರ್ಣಯವನ್ನು ಆಡಳಿತ ಮಂಡಳಿ ತೆಗೆದುಕೊಳ್ಳುವಂತೆ ಸರ್ವಾನುಮತದ ಒಪ್ಪಿಗೆಯನ್ನು ಮಹಾಸಭೆಯಲ್ಲಿ ನೀಡಲಾಯಿತು.

Also Read  ವಿಟ್ಲ: ಆಡು ಕಳ್ಳತನ ಮಾಡುತ್ತಿದ್ದ ಯುವಕರು ಪೊಲೀಸ್ ವಶಕ್ಕೆ...!

ಸಂಘದ ಸದಸ್ಯರಿಗೆ ಸೌಲಭ್ಯವನ್ನು ನೀಡಲು ಆಗ್ರಹ:
ಸಂಘದ ಲಾಭದಲ್ಲಿ ಮೃತಪಟ್ಟ ಸಂಘದ ಸದಸ್ಯರ ಅಂತ್ಯಸಂಸ್ಕಾರಕ್ಕೆ ಮತ್ತು ಪಾಕೃತಿಕ ವಿಕೋಪಗಳು ಸಂಭವಿಸಿದಾಗ ಅವರಿಗೆ ಹಣವನ್ನು ನೀಡಿ ಸಹಾಯ ಮಾಡುವಂತೆ ಸದಸ್ಯರಾದ ಧನಂಜಯ ಕೊಡಂಗೆ, ಮಾಜಿ ನಿರ್ದೇಶಕ ಕೊರಗಪ್ಪ ಗೌಡ ಮೊದಲಾದವರು ಆಗ್ರಹಿಸಿದರು. ಬಳಿಕ ಈ ಬಗ್ಗೆ ಚರ್ಚೆ ನಡೆದು ಆಡಳಿತ ಮಂಡಳಿಯ ಸಭೆಯಲ್ಲಿ ತಿರ್ಮಾನ ಕೈ ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಯಿತು.

Also Read  ಜೂ. 12ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ➤ ಕಾನೂನು ಅರಿವು ನೆರವು ಕಾರ್ಯಾಗಾರ

ಪಡಿತರ ವಿತರಣೆಗೆ ಸಿಬಂದಿ ನೇಮಿಸಿ-ಎಲ್ಸಿ ತೋಮಸ್
ಸದಸ್ಯೆ ಎಲ್ಸಿ ತೋಮಸ್ ಮಾತನಾಡಿ, ನಮ್ಮ ಸಂಘದ ಮೂಲಕ ವಿತರಣೆಯಾಗುವ ಪಡಿತರ ವ್ಯವಸ್ಥೆಗೆ ಓರ್ವ ಸಮರ್ಥ ಸಿಬಂದಿಯನ್ನು ನೇಮಿಸಿಕೊಂಡು ಗ್ರಾಮಸ್ಥರಿಗೆ ಸರಿಯದ ಸೌಲಭ್ಯವನ್ನು ನೀಡಬೇಕೆಂದು ಹೇಳಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಈಗಾಗಲೇ ಪಡಿತರ ವ್ಯವಸ್ಥೆಯಲ್ಲಿ ನಷ್ಟ ಉಂಟಾಗುತ್ತಿದೆ, ಆದರೂ ಸೌಲಭ್ಯವನ್ನು ನಿಲ್ಲಿಸದೆ ನೀಡುತ್ತಿದ್ದೆವೆ ಎಂದು ಹೇಳಿದರು, ಈ ಬಗ್ಗೆ ಎಲ್ಸಿಯವರು ಮಾತನಾಡಿ, ನಾವು ಎಲ್ಲವನ್ನು ಲಾಭದ ದೃಷ್ಟಿಯಲ್ಲಿ ನೋಡಲು ಆಗುವುದಿಲ್ಲ, ಬಹಳ ಹಿಂದಿನಿಂದಲೂ ಪಡಿತರ ವ್ಯವಸ್ಥೆ ಸಹಕಾರ ಸಂಘದ ಮೂಲಕವೇ ವಿತರಣೆಯಾಗುತ್ತಿದೆ ಆದುದರಿಂದ ನಮ್ಮ ಲಾಭದ ಹಣದಲ್ಲಿ ಸರಿದೂಗಿಸಿಕೊಂಡು ಈ ಸೇವೆಯನ್ನು ನೀಡಬೇಕು ಅಲ್ಲದೆ ಓರ್ವ ಸಿಬಂದಿಯನ್ನು ನೇಮಕಗೊಳಿಸಬೇಕು ಎಂದು ಪುನಃ ಆಗ್ರಹಿಸಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷರು ಹೇಳಿದರು.

error: Content is protected !!
Scroll to Top