(ನ್ಯೂಸ್ ಕಡಬ) newskadaba.com ಮೈಸೂರು, ಅ. 09: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಕಳೆದ ವಾರವೇ ಅರಮನೆಗೆ ಗಜಪಡೆ ಆಗಮಿಸಿದ್ದು, ಇಂದಿನಿಂದ ಗಜಪಡೆಗಳಿಗೆ ಮರಳಿನ ಮೂಟೆ ಹೊರುವ ತಾಲೀಮು ಶುರುವಾಗಲಿದೆ.
ಅಭಿಮನ್ಯು ನೇತೃತ್ವದ 5 ಆನೆಗಳಿಂದ ಮರಳು ಮೂಟೆ ಹೊರುವ ತಾಲೀಮು ನಡೆದಿದೆ. ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಿಸುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಮಾತ್ರ ಗಜಪಡೆಗಳ ತಾಲೀಮು ನಡೆಯಲಿದೆ. ಇಂದು ಬೆಳಗ್ಗೆ ಅರಮನೆಯ ಸುತ್ತ ಒಂದು ಸುತ್ತು ಹಾಕಿದ ದಸರಾ ಆನೆಗಳ ತಾಲೀಮು ಆರಂಭಕ್ಕೂ ಮುನ್ನ ಮಾವುತ, ಕಾವಾಡಿಗಳಿಂದ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು. ವಿಕ್ರಮ ಆನೆಗೆ ಮರಳು ಮೂಟೆ ಹೊರಿಸಿ ಅದರ ಮೇಲೆ ತೊಟ್ಟಿಲು ಇಟ್ಟು ತಾಲೀಮು ನಡೆಸಲಾಯಿತು. ಅರಮನೆ ಆವರಣದಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ದಸರಾ ಆನೆಗಳಾದ ಅಭಿಮನ್ಯು, ವಿಕ್ರಮ, ಗೋಪಿ, ಕಾವೇರಿ ಹಾಗೂ ವಿಜಯ ಮೊದಲ ದಿನದ ತಾಲೀಮು ನಡೆಸಿದವು. ಕೇವಲ 20 ನಿಮಿಷದಲ್ಲಿ ಗಜಪಡೆ ತಾಲೀಮು ಮುಗಿಸಿತು.
759 ಕೆ.ಜಿ. ತೂಕವಿರುವ ಚಿನ್ನದ ಅಂಬಾರಿಯನ್ನು ಇದೇ ಮೊದಲ ಬಾರಿಗೆ ಹೊರಲಿರುವ ಅಭಿಮನ್ಯುವಿಗೆ ಮರಳಿನ ಮೂಟೆ ಹೊರಿಸುವ ಮೂಲಕ ತಾಲೀಮು ನಡೆಸಲಾಯಿತು.