(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಅ. 07. ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ ಹಾಗೂ ಸಂತ್ರಸ್ತೆಯ ಮನೆಗೆ ಭೇಟಿ ನೀಡುವ ವೇಳೆ ಬಂಧನಕ್ಕೊಳಗಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕೋಶಾಧಿಕಾರಿಯ ಬಿಡುಗಡೆಗೆ ಆಗ್ರಹಿಸಿ ಬೆಳ್ತಂಗಡಿ ಜಿಲ್ಲಾ ವತಿಯಿಂದ ಬೆಳ್ತಂಗಡಿ ಮಿನಿ ವಿಧಾನಸೌಧದ ಬಳಿ ಪ್ರತಿಭಟನೆಯನ್ನು ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ಯಾಸೀನ್ ಬಂಗೇರಕಟ್ಟೆ ಮಾತನಾಡಿ, ಉತ್ತರ ಪ್ರದೇಶದಲ್ಲಿ ಅತ್ಯಚಾರ ದಿನ ಕಳೆದಂತೆ ಹೆಚ್ಚುತ್ತಲೇ ಇದೆ, ಇದಕ್ಕೆ ಕಡಿವಾಣ ಹಾಕಲು ವಿದ್ಯಾರ್ಥಿಗಳು ಮುಂದೆ ಬಂದು ಹೋರಾಡುವ ಅಗತ್ಯ ಇದೆ. ಕ್ಯಾಂಪಸ್ ಫ್ರಂಟ್ ಅದಕ್ಕಾಗಿ ಪಣತೊಟ್ಟು ನಿಂತಿದ್ದು, ಸರಕಾರ ನಮಗೆ ಲಾಠಿ, ಜೈಲು ತೋರಿಸಿ ಬೆದರಿಸಿದರೂ ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಕಾರ್ಯಕರ್ತರು ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ನಾಯಕರನ್ನು ತಕ್ಷಣ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾಧ್ಯಕ್ಷರಾದ ಸಫ್ವಾನ್ ಸುನ್ನತ್ ಕೆರೆ, ಸದಸ್ಯರಾದ ಹರ್ಷದ್ ಸುನ್ನತ್ ಕೆರೆ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಜಿಲ್ಲಾ ಸಮಿತಿ ಸದಸ್ಯ ಇಮ್ರಾನ್ ಪಾಂಡವರಕಲ್ಲು ಕಾರ್ಯಕ್ರಮವನ್ನು ನಿರೂಪಿಸಿದರು.