(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 05.ಗಾಂಜಾದಿಂದ ಎಣ್ಣೆ ತೆಗೆದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣೆಯ ಪೊಲೀಸ್ ತಂಡ ವಶಕ್ಕೆ ಪಡೆದುಕೊಂಡು ಸುಮಾರು 80ಸಾವಿರ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದ ಘಟನೆ ಉಕ್ಕುಡ ಕಾಂತಡ್ಕದಲ್ಲಿ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಉಕ್ಕುಡ ನಿವಾಸಿ ಅಬ್ದುಲ್ ಖಾದರ್ ಯಾನೆ ಅದ್ದು (25) ಬಂಧಿತ ಆರೋಪಿ. ಅಕ್ರಮವಾಗಿ ಮಾದಕ ವಸ್ತುಗಳನ್ನು ಸಂಗ್ರಹ ಮಾಡಿ ಮಾರಾಟ ಮಾಡುವ ಮಾಹಿತಿ ಹಿನ್ನಲೆಯಲ್ಲಿ ವೃತ್ತ ನಿರೀಕ್ಷಕರ ಅಪರಾಧ ಪತ್ತೆ ದಳ ಹಾಗೂ ವಿಟ್ಲ ಠಾಣೆಯ ಸಿಬ್ಬಂಧಿಗಳ ಜತೆಗೆ ದಾಳಿ ನಡೆಸಲಾಗಿದೆ. ಈ ಸಂದರ್ಭದಲ್ಲಿ ಈತ ಅನುಮಾನಾಸ್ಪದವಾಗಿ ವರ್ತಿಸಿದ್ದರಿಂದ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಗಾಂಜಾ ಎಣ್ಣೆ ತಯಾರಿಸಿ ಮಾರಾಟ ಮಾಡುವ ಬಗ್ಗೆ ಒಪ್ಪಿಕೊಂಡಿದ್ದಾನೆ.
ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್ ಮಾರ್ಗದರ್ಶನದಲ್ಲಿ ಬಂಟ್ವಾಳ ಸಹಾಯಕ ಅಧೀಕ್ಷಕ ವೆಲೆಂಟನ್ ಡಿಸೋಜ್ ನಿರ್ದೇಶನದಂತೆ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರನ್ನೊಳಗೊಂಡ ವಿಟ್ಲ ಠಾಣಾ ಉಪನಿರೀಕ್ಷಕ ವಿನೋದ್ ಎಸ್. ಕೆ., ಬಂಟ್ವಾಳ ಸಂಚಾರಿ ಠಾಣೆಯ ಉಪನಿರೀಕ್ಷಕ ರಾಜೇಶ್ ಕೆ. ವಿ., ವಿಟ್ಲ ಪ್ರೊಬೆಷನರಿ ಉಪನಿರೀಕ್ಷಕ ಕೃಷ್ಣಕಾಂತ್, ಸಿಬ್ಬಂದಿಗಳಾದ ಗೋಣಿಬಸಪ್ಪ, ಕುಮಾರ್, ವಿವೇಕ್, ವಿಟ್ಲ ಸಿಬ್ಬಂದಿಗಳಾದ ಕೆ. ಟಿ. ಜಯರಾಮ, ಪ್ರಸನ್ನ, ಲೋಕೇಶ್, ಪ್ರತಾಪ, ವಿನಾಯಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.