(ನ್ಯೂಸ್ ಕಡಬ) newskadaba.com ಕಡಬ, ಸೆ.29. ರೆಂಜಿಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರೋಸಮ್ಮ ಕೆ.ಎಂ.ರವರು ನಾಳೆ (ಸೆ.30) ತನ್ನ ಶಿಕ್ಷಕಿ ಸೇವಾ ವೃತ್ತಿಯಿಂದ ನಿವೃತ್ತಿ ಹೊಂದಲಿದ್ದು, ರೆಂಜಿಲಾಡಿ ಶಾಲಾ ವತಿಯಿಂದ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಲಿದೆ.
1996 ಜನವರಿ 17ರಂದು ನೂಜಿಬಾಳ್ತಿಲ ಸರಕಾರಿ ಶಾಲೆಯ ಶಿಕ್ಷಕಿಯಾಗಿ ತನ್ನ ವೃತ್ತಿ ಜೀವನವನ್ನು ಆರಂಭಿಸಿದ ಶ್ರೀಮತಿ ರೋಸಮ್ಮ ಕೆ.ಎಂ ರವರು 2002 ರಲ್ಲಿ ರೆಂಜಿಲಾಡಿ ಶಾಲೆಗೆ ವರ್ಗಾವಣೆಗೊಂಡು 18 ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿರುತ್ತಾರೆ. ಸಾವಿರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿರುವ ಅವರು, ದಕ್ಷ, ನಿಷ್ಠಾವಂತ ಶಿಕ್ಷಕಿಯಾಗಿದ್ದು, ಶಿಕ್ಷಣ ಕ್ಷೇತ್ರದ ಹಿರಿಯ ಅಧಿಕಾರಿಗಳೊಂದಿಗೆ, ಕ್ಲಸ್ಟರ್ ಸಿ.ಅರ್.ಪಿ ಯವರೊಂದಿಗೆ, ಕ್ಲಸ್ಟರ್ ಮಟ್ಟದ ಎಲ್ಲಾ ಶಿಕ್ಷಕರೊಂದಿಗೆ ಅದೇ ರೀತಿ ಶಾಲಾ ಮುಖ್ಯಗುರುಗಳು, ಸಹೋದ್ಯೋಗಿ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿಯವರು, ಮಕ್ಕಳ ಪೋಷಕರೊಂದಿಗೆ ಅನ್ಯೋನ್ಯತೆಯಿಂದಿದ್ದು, ಎಲ್ಲರ ಪ್ರೀತಿಯನ್ನು ಗಳಿಸಿರುವ ಅವರು ವಿದ್ಯಾರ್ಥಿಗಳೊಂದಿಗೆ ಸದಾ ನಗುಮುಖದಲ್ಲಿ ಪಾಠ ಮಾಡುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸುವಲ್ಲಿ ಸದಾ ಸಹಕರಿಸಿದ್ದಾರೆ. ಸರಕಾರಿ ಕೆಲಸ ದೇವರ ಕೆಲಸವೆಂದು ಕರ್ತವ್ಯ ನಿಭಾಯಿಸಿದ ರೋಸಮ್ಮ ಕೆ.ಎಂ. ರವರು ಸೆಪ್ಟೆಂಬರ್ 30 ರಂದು ತನ್ನ ಸರಕಾರಿ ಸೇವಾ ವಯೋನಿವೃತ್ತಿ ಹೊಂದಲಿದ್ದು, ನಮ್ಮ ಶಾಲಾ ವತಿಯಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ ಅವರ ವೃತ್ತಿ ಸೇವೆಯ ಸವಿನೆನೆಪಿಗಾಗಿ ಶಾಲಾ ವಠಾರದಲ್ಲಿ ಕಲ್ಪವೃಕ್ಷ ನೆಡುವ ಮೂಲಕ ಅವರ ಸೇವೆಯನ್ನು ಸದಾ ನೆನಪಿನಲ್ಲಿಡುವ ಕಾರ್ಯಕ್ರಮ ಶಾಲೆಯಲ್ಲಿ ನಡೆಯಲಿದೆ ಎಂದು ಶಾಲಾ ಮುಖ್ಯ ಗುರುಗಳಾದ ಮೇದಪ್ಪ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರಾಡಿ ಗ್ರಾಮದ ಕೋಟಾಯಿಲ್ ದಿ|ಮಾರ್ಕೋಸ್ ಕೆ.ಯು ಹಾಗೂ ಎಲಿಜಬೆತ್ತ್ ದಂಪತಿಗಳ ಪ್ರಥಮ ಪುತ್ರಿಯಾಗಿರುವ ಶಿಕ್ಷಕಿ ರೋಸಮ್ಮ ಕೆ.ಎಂ ರವರು ಶಿರಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ ಬಳಿಕ ಉದನೆ ಸಂತ ಅಂತೋಣಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದು ಮಂಗಳೂರಿನ ಕಿನ್ನಿಕಂಬ್ಲ ರೋಸಾ ಮಿಸ್ಟಿಕಾ ಟೀಚರ್ ಟ್ರೈನಿಂಗ್ ಕಾಲೇಜಿನಲ್ಲಿ ಟಿಸಿಹೆಚ್ ತರಬೇತಿ ಹೊಂದಿ ಸರಕಾರಿ ಶಾಲಾ ಶಿಕ್ಷಕಿಯಾಗಿ ಉದ್ಯೋಗ ಪಡೆದು ಕಳೆದ 25 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುತ್ತಾರೆ. ನೂಜಿಬಾಳ್ತಿಲ ಬೆಥನಿ ಪ.ಪೂ ಕಾಲೇಜಿನ ಪ್ರಾಂಶುಪಾಲ ದಿ| ಎಂ.ಪಿ. ವರ್ಗೀಸ್ ರವರ ಪತ್ನಿಯಾಗಿರುವ ಇವರು ರೋಬಿನ್ ಫಿಲಿಪ್, ಜೋಬಿನ್ ಜೋನ್ ಹಾಗು ಶೈಬಿನ್ ತೋಮಸ್ ಎಂಬ 3 ಗಂಡು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳೊಂದಿಗೆ ನೂಜಿಬಾಳ್ತಿಲ ಗ್ರಾಮದ ಬರಿಕ್ಕಳ ಮುದಲಪುರ ಎಂಬಲ್ಲಿ ವಾಸವಾಗಿದ್ದಾರೆ.