(ನ್ಯೂಸ್ ಕಡಬ) newskadaba.com ಕಡಬ, ಸೆ.21. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಗ್ರಾಮಸ್ಥರ ತೀವ್ರ ವಿರೋಧದ ನಡುವೆ ಇತ್ತೀಚೆಗೆ ಆರಂಭಗೊಂಡ ಮದ್ಯದಂಗಡಿಯನ್ನು ತೆರವಿಗೆ ಪಟ್ಟು ಹಿಡಿದು ಭಾನುವಾರದಿಂದ ನಡೆಸುತ್ತಿದ್ದ ಪ್ರತಿಭಟನೆಗೆ ಮಣಿದು ಬುಧವಾರದಂದು ಪುತ್ತೂರು ಸಹಾಯಕ ವಿಭಾಗಿಯ ಅಧಿಕಾರಿ ಡಾ.ರಘುನಂದನ್ ಮೂರ್ತಿ ಸ್ಥಳಕ್ಕಾಗಮಿಸಿ ಬಂದ್ ಮಾಡಿಸಿದ್ದ ಮದ್ಯದಂಗಡಿಯನ್ನು ಇಂದು ಬೆಳಿಗ್ಗೆ ಪುನಃ ತೆರೆದಿದ್ದು, ಸ್ಥಳಕ್ಕೆ ಗ್ರಾಮಸ್ಥರು ಜಮಾವಣೆಗೊಳ್ಳುತ್ತಿದ್ದಾರೆ.
ಬುಧವಾರ ಸಂಜೆ ಅಧಿಕಾರಿಗಳು ಮುಚ್ಚಿ ಹೋಗಿದ್ದ ಮದ್ಯದಂಗಡಿಯನ್ನು ಗುರುವಾರ ಬೆಳಿಗ್ಗೆ ತೆರೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಹಾಗಾದರೆ ಪುತ್ತೂರು ಸಹಾಯಕ ವಿಭಾಗೀಯ ಅಧಿಕಾರಿಯವರ ಆದೇಶಕ್ಕೆ ಬೆಲೆ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಲರ್ಕಣಿ ನೇತೃತ್ವದಲ್ಲಿ ಪೊಲೀಸರು ಬಿಗೋ ಬಂದೋ ಬಸ್ತು ಒದಗಿಸಿದ್ದಾರೆ.