(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 27: ಕೇರಳಕ್ಕೆ ಅಕ್ರಮವಾಗಿ ರಕ್ತ ಚಂದನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವರನ್ನು ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಸೆ.26ರಂದು ಬಂಧಿಸಿದೆ.
ಪುತ್ತೂರು ತಾಲೂಕು ಸವಣೂರು ಗ್ರಾಮದ ಅಬ್ಬು ಚಾಪಳ್ಳ ಅಲಿಯಾಸ್ ಉಮ್ಮರ್ ಫಾರೂಕ್ (32) ಬಂಧಿತ ಆರೋಪಿ.ಸೆ.26ರಂದು ವಿಟ್ಲ ಠಾಣಾ ಎಸ್.ಐ ವಿನೋದ್ ರೆಡ್ಡಿಯವರ ನೇತೃತ್ವದ ಪೊಲೀಸರ ತಂಡ ಗಸ್ತು ತಿರುಗುತ್ತಿದ್ದ ವೇಳೆ ವಿಟ್ಲ ಸರಕಾರಿ ಬಸ್ ನಿಲ್ದಾಣದ ಬಳಿ ವ್ಯಕ್ತಿಯೋರ್ವ ಪ್ಲಾಸ್ಟಿಕ್ ಚೀಲವೊಂದನ್ನು ಹಿಡಿದು ಅನುಮಾನಾಸ್ಪದವಾಗಿ ತಿರುಗಾಡುತ್ತಿರುವುದು ಕಂಡು ಬಂದಿತ್ತು.
ಆತನನ್ನು ಕರೆದು ವಿಚಾರಣೆ ನಡೆಸಿದಾಗ ಆತ ತದ್ವಿರುದ್ಧ ಉತ್ತರ ನೀಡಿದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಇನ್ನಷ್ಟು ವಿಚಾರಣೆ ನಡೆಸಿದಾಗ ಆತ ಬೆಂಗಳೂರಿನಿಂದ ಕೇರಳಕ್ಕೆ ರಕ್ತ ಚಂದನ ಸಾಗಾಟ ಮಾಡುತ್ತಿರುವುದಾಗಿ ತಿಳಿದುಬಂದಿತ್ತು. ಬಳಿಕ ಆತನ ಬಳಿ ಇದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದು ನೋಡಿದಾಗ 24,200 ರೂಪಾಯಿ ಮೌಲ್ಯದ 12 ಕಿಲೋ ಗ್ರಾಂ ತೂಕದ ರಕ್ತ ಚಂದನದ ತುಂಡು ಪತ್ತೆಯಾಗಿದೆ.