(ನ್ಯೂಸ್ ಕಡಬ) newskadaba.com ಕಡಬ, ಸೆ.20. ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಪೇಟೆಯಲ್ಲಿ ಗ್ರಾಮಸ್ಥರ ತೀವ್ರ ವಿರೋಧದ ನಡುವೆಯೂ ಇತ್ತೀಚೆಗೆ ಆರಂಭಗೊಂಡ ಮದ್ಯದಂಗಡಿ ತೆರವಿಗೆ ಪಟ್ಟು ಹಿಡಿದು ಭಾನುವಾರದಿಂದ ಆರಂಭಗೊಂಡಿದ್ದ ಪ್ರತಿಭಟನೆಯು ನಾಲ್ಕನೇ ದಿನವಾದ ಬುಧವಾರ ಮುಂದುವರಿದು ಸಾಯಂಕಾಲ ಪುತ್ತೂರು ಸಹಾಯಕ ವಿಭಾಗಿಯ ಅಧಿಕಾರಿ ಡಾ.ರಘುನಂದನ್ ಮೂರ್ತಿ ಸ್ಥಳಕ್ಕಾಗಮಿಸಿ ಮದ್ಯದಂಗಡಿಯ ಸ್ಥಳ ಮಹಜರು ನಡೆಸಿ ಮುಂದಿನ ಆದೇಶದವರೆಗೆ ಬಂದ್ ಮಾಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಎ.ಸಿ ಪ್ರಸ್ತುತವಿರುವ ಮದ್ಯದಂಗಡಿಯ ಕಟ್ಟಡದ ವಿಚಾರದಲ್ಲಿ ಗೊಂದಲವಿದ್ದು ಕಂದಾಯ ಇಲಾಖೆಯ ಸರ್ವೆ ಅಧಿಕಾರಿಗಳು ಗುರುವಾರ ಸರ್ವೆ ನಡೆಸಿ ಮುಂದಿನ ಕ್ರಮಕೈಗೊಳ್ಳುವ ತನಕ ಮದ್ಯದಂಗಡಿ ಬಂದ್ ಆಗಿರುವುದಾಗಿ ತಿಳಿಸಿದರು. ಪರಿಸರದ ಸರಕಾರಿ ಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಸೇರಿಕೊಳ್ಳುವ ಮೂಲಕ ಬುಧವಾರ ಬೆಳಗ್ಗಿನಿಂದಲೇ ಪ್ರತಿಭಟನೆಯು ತೀವ್ರ ಸ್ವರೂಪವನ್ನು ಪಡೆದಿತ್ತು. ಪ್ರತಿಭಟನೆ ನಡೆಯುವ ಸ್ಥಳದ ಮಾರು ದೂರುದಲ್ಲಿದ್ದ ನೂಜಿಬಾಳ್ತಿಲ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಎಲ್ಲಾ ವಿದ್ಯಾರ್ಥಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರಿಂದ ತರಗತಿ ನಡೆಯಲಿಲ್ಲ.
ಮಧ್ಯಾಹ್ನ ಅಬಕಾರಿ ಡೆಪ್ಯುಟಿ ಸುಪರಿಡೆಂಟ್ ಮುರಳಿಧರ, ಅಧಿಕಾರಿಗಳಾದ ಸುಬ್ರಹ್ಮಣ್ಯ ರಾವ್, ನವೀನ್, ಅಂಗಾರ, ಸುಜಾತ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಅಬಕಾರಿ ಜಿಲ್ಲಾಧಿಕಾರಿ ನಾಳೆ ಮದ್ಯದಂಗಡಿ ಮುಚ್ಚಿಸುಲಾಗುವುದು ಎಂದು ತಿಳಿಸಿದ್ದಾರೆ ಆದನ್ನು ನಿಮಗೆ ತಿಳಿಸಲಷ್ಟೆ ಬಂದಿದ್ದೇವೆ ಎಂದಾಗ ಆಕ್ರೋಶಗೊಂಡ ಪ್ರತಿಭಟನಕಾರರು ನೀವು ಮದ್ಯದಂಗಡಿಯನ್ನು ಮುಚ್ಚಿಸಿದ ಬಳಿಕ ಹೊರಡಿ ಎಂದರು. ಸುಮಾರು ಒಂದುವರೆ ಗಂಟೆಗಳ ಕಾಲ ಪ್ರತಿಭಟನಕಾರರು ಮುತ್ತಿಗೆ ಹಾಕಿ ತರಾಟೆಗೆತ್ತಿಕೊಂಡರು. ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಪುತ್ತೂರು ಸಹಾಯಕ ಕಮಿಷನರ್ ಡಾ.ರಘುನಂದನ್ ಮೂರ್ತಿ ಸ್ಥಳಕ್ಕೆ ಆಗಮಿಸಿವುದಾಗಿ ತಿಳಿಸಿದರು. ಕಲ್ಲುಗುಡ್ಡೆ – ಕೊಣಾಜೆ ರಸ್ತೆಯ ಎರಡು ಭಾಗದಲ್ಲಿ ಪ್ರತಿಭಟನಕಾರರು ರಸ್ತೆಯಲ್ಲಿ ಕುಳಿತು ಅಧಿಕಾರಿಗಳು ಸ್ಥಳದಿಂದ ತೆರಳದಂತೆ ತಡೆದರು.
ಸಂಜೆ 6 ಗಂಟೆ ಸುಮಾರಿಗೆ ಸ್ಥಳಕ್ಕಾಗಮಿಸಿದ ಪುತ್ತೂರು ಸಹಾಯಕ ಕಮಿಷನರ್ ಅವರಲ್ಲಿ ಪ್ರತಿಭಟನಕಾರರು ಮಾತಿಗಿಳಿದರು. ಈ ಸಂದರ್ಭ ಮಾತನಾಡಿದ ಎಸಿ ಗುರುವಾರ ಸರ್ವೆ ಮಾಡಿ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದಾಗ ಆಕ್ರೋಶಗೊಂಡ ಪ್ರತಿಭಟನಕಾರರು, ಸ್ಥಳಕ್ಕೆ ಆಗಮಿಸಿದ ಎಲ್ಲಾ ಅಧಿಕಾರಿಗಳು ಭರವಸೆ ಮಾತ್ರ ನೀಡುವುದು ಬಿಟ್ಟರೆ ಬಂದ್ ಮಾಡಿಸುವ ಗೋಜಿಗೆ ಹೋಗುವುದಿಲ್ಲ. ನಿಮ್ಮ ಭರವಸೆ ನಮಗೆ ಬೇಡ. ಸಾಧ್ಯವಾದರೆ ಬಂದ್ ಮಾಡಿಸಿ ಇಲ್ಲವೆ ಬಂದ್ ಮಾಡುವ ಅಧಿಕಾರಿ ಬರುವವರೆಗೆ ನಮ್ಮ ಜೊತೆಗಿರಿ. ನಿಮಗೆ ಊಟದ ಎಲ್ಲಾ ವ್ಯವಸ್ಥೆ ಕಲ್ಪಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೇಲಾದಿಕಾರಿಗಳೊಂದಿಗೆ ಮಾತನಾಡಿದ ಎಸಿ ಬಂದ್ ಮಾಡುವುದಾಗಿ ಒಪ್ಪಿಕೊಂಡರು. ಸರ್ವೆ ಇಲಾಖೆಯವರು ಮಹಜರು ನಡೆಸಿ ಬಳಿಕ ಮೇಲಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಅಲ್ಲಿಯವರೆಗೆ ಮದ್ಯದಂಗಡಿ ಬಂದ್ ಆಗಿರುತ್ತದೆ ಎಂದರು. ಅಬಕಾರಿ ಇಲಾಖಾ ಅಧಿಕಾರಿಗಳು ಮದ್ಯದಂಗಡಿ ಸಿಬ್ಬಂದಿಯನ್ನು ಹೊರಬರಲು ತಿಳಿಸಿ ಬೀಗ ಜಡಿದರು.
ಪ್ರತಿಭಟನಕಾರರು ಬುಧವಾರ ಕಲ್ಲುಗುಡ್ಡೆ, ಪೇರಡ್ಕ, ಗೋಳಿಯಡ್ಕ ಬಂದ್ಗೆ ಕರೆ ನೀಡಿದ್ದರು. ಅಂತೆಯೇ ಈ ಪೇಟೆಗಳಲ್ಲಿ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿದ್ದವು. ಈ ಪೇಟೆಗಳಿಂದ ಕಡಬ ಮುಂತಾದ ಮುಖ್ಯ ಪೇಟೆಗಳಿಗೆ ಸರ್ವಿಸ್ ನಡೆಸುವ ವಾಹನಗಳು ರಸ್ತೆಗಿಳಿಯಲಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಓಬೆಲೆ, ಶೊಭಾನೆ ಪದಗಳನ್ನು ಹಾಡುತ್ತಾ ಕಾಲ ಕಳೆದರು. ಬಾರ್ ಬಂದ್ ಆಗದಿದ್ದಲ್ಲಿ ರಾತ್ರಿಯಿಡಿ ಪ್ರತಿಭಟನೆಗೆ ಸಿದ್ದರಾಗಿ ಸಂಜೆ ವೇಳೆಗೆ ಲೈಟಿಂಗ್ಸ್ ವ್ಯವಸ್ಥೆ ಮಾಡಿಕೊಂಡಿದ್ದರು. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಅನಿಲ್ ಕುಲರ್ಕಣಿ ನೇತೃತ್ವದಲ್ಲಿ ಪೊಲೀಸರು ಬಿಗೋ ಬಂದೋ ಬಸ್ತು ಒದಗಿಸಿದ್ದರು.