ಕಟ್ಟಡ ನಿರ್ಮಾಣ ಪರವಾನಿಗೆಗೆ ಬಿಳಿನೆಲೆ ಗ್ರಾ.ಪಂ.ನಿಂದ ವಿಳಂಬ ನೀತಿ ► ಸೆ. 25 ರಿಂದ ಗ್ರಾ.ಪಂ. ಎದುರು ಗಂಡ-ಹೆಂಡತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ

(ನ್ಯೂಸ್ ಕಡಬ) newskadaba.com ಕಡಬ, ಸೆ.20. ಅವಶ್ಯ ಎಲ್ಲಾ ದಾಖಲೆಗಳನ್ನು ನೀಡಿದರೂ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡದೆ ಸತಾಯಿಸುತ್ತಿರುವ ಬಿಳಿನೆಲೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಅನಗತ್ಯ ಕಿರುಕುಳ ನೀಡುತ್ತಿದೆ. ಸೆ 24 ರ ಒಳಗೆ ಪರವಾನಿಗೆ ನೀಡದಿದ್ದರೆ ಪಂಚಾಯಿತಿ ಎದುರು ಸೆ 25 ರಿಂದ ಅನಿರ್ಧಿಷ್ಠಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಉದ್ಯಮಿ ಕೆ.ಟಿ.ತೋಮ್ಸ್‌ನ್ ಎಚ್ಚರಿಕೆ ನೀಡಿದ್ದಾರೆ.

ಅವರು ಕಡಬ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಳಿನೆಲೆ ಗ್ರಾಮ ಪಂಚಾಯಿತಿ ಕಟ್ಟಡ ಪರವಾನಿಗೆ ನೀಡುವಲ್ಲಿ ಯಾರದೋ ಪಿತೂರಿಗೆ ಒಳಗಾಗಿ ನನಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ಮೇರೊಂಜಿಯಲ್ಲಿ ವಾಣಿಜ್ಯ ಕಟ್ಟಡ ಕಟ್ಟಲು ನಾನು ಪರವಾನಿಗೆಗಾಗಿ ಬಿಳಿನೆಲೆ ಗ್ರಾಮ ಪಂಚಾಯಿತಿಗೆ ಅರ್ಜಿ ನೀಡಿ 60 ದಿನಗಳ ಕಳೆದರೂ ನನಗೆ ಪರವಾನಿಗೆ ನೀಡಿಲ್ಲ, ನಾನೊಬ್ಬ ಹಿರಿಯ ನಾಗರಿಕನಾಗಿದ್ದು, ನಾನು ಹೃದಯ ಸಂಬಂಧಿ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದೇನೆ. ಪರವಾನಿಗೆಗಾಗಿ ಪಂಚಾಯಿತಿಗೆ ಅಲೆದಾಟ ನಡೆಸಿ ಸುಸ್ತಾಗಿದ್ದು, ಸರಿಯಾದ ದಾಖಲೆ ನೀಡಿದರೂ ಪರವಾನಿಗೆ ನೀಡದಿರುವ ಬಗ್ಗೆ ನನಗೆ ಸ್ಪಷ್ಟವಾಗಿ ಯಾವುದೇ ಮಾಹಿತಿ ನೀಡುತ್ತಿಲ್ಲ. ಇದು ಮಾನವ ಹಕ್ಕಿನ ಉಲ್ಲಂಘನೆಯಾಗಿದೆ. ಅರ್ಜಿಯನ್ನು 60 ದಿನ ಇಟ್ಟುಕೊಳ್ಳುವ ಹಕ್ಕು ನಮಗಿದೆ ಎಂದು ಹೇಳುತ್ತಿದ್ದ ಪಂಚಾಯಿತಿ ಅಧ್ಯಕ್ಷರು ಅರ್ಜಿ ನೀಡಿ 72 ದಿನಗಳಾದರೂ ಪರವಾನಿಗೆ ನೀಡಲು ಮೀನಾಮೇಷ ಎಣಿಸಿ ಸತಾಯಿಸುತ್ತಿದ್ದಾರೆ. ಈ ಸಂಬಂಧ ನಾನು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿಯವರಿಗೆ ದೂರು ನೀಡಿದ್ದು, ಅವರು ಪರವಾನಿಗೆ ನೀಡಿ ಎಂದು ಆದೇಶ ನೀಡಿದರೂ ಪರವಾನಿಗೆ ನೀಡುತ್ತಿಲ್ಲ. ಕಟ್ಟಡ ಕಟ್ಟಲು ಉದ್ದೇಶಿಸಿರುವ ನನ್ನ ಜಾಗವನ್ನು ಸರ್ವೆ ಮಾಡಿಸಿ, ಕಂದಾಯ ನಿರೀಕ್ಷಕರು ಸ್ಥಳ ತನಿಖೆ ಮಾಡಿ, ತಹಶೀಲ್ದಾರರು ರುಜು ಮಾಡಿ ನಕ್ಷೆ ನೀಡಿದರೂ ಅದನ್ನು ಸಂಶಯದಿಂದ ನೋಡಲಾಗುತ್ತಿದೆ. ಪಂಚಾಯಿತಿ ಹಾಗೂ ಕಂದಾಯ ಅಧಿಕಾರಿಗಳು ಜಂಟಿ ಸರ್ವೆ ಮಾಡಬೇಕೆಂದು ಅಧ್ಯಕ್ಷರು ನೋಟೀಸ್ ನೀಡಿದ್ದಾರೆ. ನನಗೆ ಬೇಕೆಂತಲೇ ಕಿರುಕುಳ ನೀಡುವ ಉದ್ದೇಶದಿಂದ ಕೆಲವು ಜನರಿಂದ ನನ್ನ ಜಾಗ ಸರಕಾರಿ ಜಾಗ ಎಂದು ದೂರು ಕೊಡಿಸುವಲ್ಲಿ ಪಂಚಾಯಿತಿಯವರೇ ಮುತುವರ್ಜಿ ವಹಿಸಿದ್ದಾರೆ. ಉದ್ದೇಶಪೂರ್ವಕವಾಗಿ ಕುಂಟು ನೆಪ ಹೇಳಿ ಪರವಾನಿಗೆ ನೀಡಲು ಅಡ್ಡಗಾಲು ಹಾಕಲಾಗುತ್ತದೆ. ಈ ಬಗ್ಗೆ ಪುತ್ತೂರು ಹಾಗೂ ಸುಳ್ಯ ಶಾಸಕರಿಗೆ ಮೌಖಿಕ ದೂರು ನೀಡಿದ್ದೇನೆ. ಮಾತ್ರವಲ್ಲ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಕಂದಾಯ ಇಲಾಖೆ ಹಾಗೂ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ. ತಕ್ಷಣ ಎಚ್ಚೆತ್ತು ಸೆ. 24 ಒಳಗಾಗಿ ಪಂಚಾಯಿತಿಯವರು ಪರವಾನಿಗೆ ನೀಡದಿದ್ದರೆ ಸೆ.25 ರಂದು ನಾನು ಮತ್ತು ನನ್ನ ಪತ್ನಿ ಪಂಚಾಯಿತಿನ ಜಗಲಿಯಲ್ಲಿ ಅಹಿಂಸಾತ್ಮಕ ರೀತಿಯಲ್ಲಿ ಅನಿರ್ಧಿಷ್ಟಾವಧಿಯ ಧರಣಿ ನಡೆಸುತ್ತೇವೆ. ನಾನೊಬ್ಬ ಅನಾರೋಗ್ಯ ವ್ಯಕ್ತಿಯಾಗಿರುವುದರಿಂದ ಪ್ರತಿಭಟನೆಯಿಂದ ನನಗೇನಾದರೂ ತೊಂದರೆಯಾದರೆ ಅಥವಾ ನನ್ನ ಪ್ರಾಣಕ್ಕೆ ಸಂಚಕಾರ ಬಂದರೆ ಅದಕ್ಕೆ ಪಂಚಾಯಿತಿಯೇ ನೇರ ಹೊಣೆಯಾಗುತ್ತದೆ ಎಂದು ತೋಮ್ಸನ್ ಕೆ.ಟಿ. ಹೇಳಿದರು.

Also Read  ಕಲ್ಲಡ್ಕ: ಜಲೀಲ್‌ ಕರೋಪಾಡಿ ಕೊಲೆ ಆರೋಪಿಗೆ ಚೂರಿ ಇರಿತ ► ಹತ್ಯೆಗೆ ವಿಫಲ ಯತ್ನ, ಕಲ್ಲಡ್ಕ ಬಂದ್

ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ಕಡಬ ತಾಲೂಕು ರೈತ ಸಂಘದ ಅಧ್ಯಕ್ಷ ವಿಕ್ಟರ್ ಮಾರ್ಟಿಸ್ ಮಾತನಾಡಿ ತೋಮ್ಸ್‌ನ್ ಅವರು ಒಬ್ಬ ರೈತರೂ ಆಗಿರುವುದರಿಂದ ಅವರ ಹೋರಾಟ ನ್ಯಾಯಯುತವಾಗಿದ್ದರೆ ಸಂಘದಿಂದ ಸಂಪೂರ್ಣ ಬೆಂಬಲವಿದೆ. ಅವರಿಗೆ ಅನ್ಯಾಯವಾದರೆ ನಾನೂ ಅವರೊಟ್ಟಿಗೆ ಪ್ರತಿಭಟನೆಗೆ ಕುಳಿತುಕೊಳ್ಳುತ್ತೇನೆ ಎಂದರು.

error: Content is protected !!
Scroll to Top