(ನ್ಯೂಸ್ ಕಡಬ) newskadaba.com ಕಾರವಾರ, ಸೆ. 21: ತಡರಾತ್ರಿ ಬೀಸಿದ ಭಾರೀ ಪ್ರಮಾಣದ ಗಾಳಿಯಿಂದಾಗಿ ಎರಡು ಮೀನುಗಾರಿಕಾ ಬೋಟುಗಳು ದಡಕ್ಕೆ ತೇಲಿಬಂದ ಘಟನೆ ನಗರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ ನಡೆದಿದೆ. ಆಯಂಕರ್ ತುಂಡಾದ ಪರಿಣಾಮ ಈ ಅವಘಡ ಸಂಭವಿಸಿದೆ.
ಬಂದರು ಪ್ರದೇಶದ ಸಮುದ್ರದಲ್ಲಿ ಲಂಗರು ಹಾಕಿದ್ದ ಮಲ್ಪೆ ಭಾಗದ ಮಜ್ದೂರ್ ಹಾಗೂ ಪ್ರಾವಿನೆನ್ಸ್ ಹೆಸರಿನ ಬೋಟುಗಳು ಇವಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಹಿನ್ನಲೆ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆ, ಉಡುಪಿ, ಮಂಗಳೂರು ಹಾಗೂ ಹೊರರಾಜ್ಯ ಗೋವಾ, ತಮಿಳುನಾಡು ಮೂಲದ ಬೋಟುಗಳು ಸಹ ಕಾರವಾರ ಬಂದರು ಪ್ರದೇಶದಲ್ಲಿ ಆಶ್ರಯವನ್ನ ಪಡೆದಿವೆ. ಅದರಂತೆ ಸಮುದ್ರದಲ್ಲಿ ಲಂಗರು ಹಾಕಿ ನಿಂತಿದ್ದ ಬೋಟುಗಳು ಗಾಳಿಯ ರಭಸಕ್ಕೆ ದಡಕ್ಕೆ ತೇಲಿ ಬಂದಿದೆ.
ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಹಿನ್ನಲೆ ಮುನ್ನೆಚ್ಚರಿಕಾ ಕ್ರಮವಾಗಿ ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಎಚ್ಚರಿಸಿದ್ದು ಸುರಕ್ಷಿತ ಪ್ರದೇಶದಲ್ಲಿ ಲಂಗರು ಹಾಕುವಂತೆ ಸೂಚನೆ ನೀಡಿದೆ.