(ನ್ಯೂಸ್ ಕಡಬ) newskadaba.com ನವದೆಹಲಿ, ಸೆ20: ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ರಾಜ್ಯಸಭಾ ಸದಸ್ಯರಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.
ರಾಜ್ಯಸಭೆಯ ಸಭಾಧ್ಯಕ್ಷರೂ ಆಗಿರುವ ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಪ್ರಮಾಣವಚನ ಬೋಧಿಸಿದರು. ದೇವೇಗೌಡರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು. ‘ನಮ್ಮ ಸದನಕ್ಕೆ ಉತ್ತಮ ವ್ಯಕ್ತಿಯ ಸೇರ್ಪಡೆಯಾಗಿದೆ. ಮಾಜಿ ಪ್ರಧಾನಿ ಹಾಗೂ ದೇಶದ ಹಿರಿಯ ರಾಜಕೀಯ ನಾಯಕರಲ್ಲಿ ಒಬ್ಬರಾಗಿರುವ ಎಚ್.ಡಿ. ದೇವೇಗೌಡ ಅವರು ಈಗ ನಮ್ಮ ಸದನಕ್ಕೆ ಬಂದಿದ್ದಾರೆ’ ಎಂದು ಉಪ ರಾಷ್ಟ್ರಪತಿ ಪರಿಚಯಿಸಿದರು. ದೇವೇಗೌಡರು 2019ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಸೋಲು ಅನುಭವಿಸಿದ್ದರು. 2020ರ ಜೂನ್ ನಲ್ಲಿ ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಎರಡನೇ ಬಾರಿಗೆ ಅವರು ರಾಜ್ಯಸಭೆಯ ಸದಸ್ಯರಾಗಿದ್ದಾರೆ.