(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ. 19. ಬಹು ನಿರೀಕ್ಷಿತ ಕೇರಳ ತುಳು ಅಕಾಡೆಮಿಯ ತುಳು ಭವನವನ್ನು ಕೇರಳ ಸಾಂಸ್ಕೃತಿಕ ಸಚಿವ ಎ.ಕೆ ಬಾಲನ್ ಅವರು ಆನ್ ಲೈನ್ ಮೂಲಕ ಉದ್ಘಾಟನೆ ಮಾಡಿದರು.
ಹೊಸಂಗಡಿ ಸಮೀಪ ನಿರ್ಮಾಣವಾಗಿರುವ ಈ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಕೇರಳ ಕಂದಾಯ ಸಚಿವ ಇ. ಚಂದ್ರ ಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಶೋಧಕ ಡಾ. ವೆಂಕಟರಾಜ ಪುಣಿಂಚಿತ್ತಾಯ ಅವರ ಹೆಸರಿನ ಗ್ರಂಥಾಲಯವನ್ನು ಶಾಸಕ ಎಂ. ಸಿ ಖಮರುದ್ದೀನ್ ಹಾಗೂ ಸಭಾಂಗಣವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ.ಸಿ ಬಶೀರ್ ಉದ್ಘಾಟನೆಗೈದರು.
ಕೊರೋನಾ ನಿಯಂತ್ರಣವನ್ನು ಒಳಗೊಂಡ ತುಳು ಸಾಕ್ಷ್ಯ ಚಿತ್ರವನ್ನು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್ ಜಯಾನಂದ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು, ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಮೊದಲಾದವರು ಭಾಗವಹಿಸಿದ್ದರು.