(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ.19: ಬಹುನಿರೀಕ್ಷಿತ ಕೇರಳ ತುಳು ಅಕಾಡೆಮಿಯ ತುಳುಭವನವನ್ನು ಕೇರಳ ಸಾಂಸ್ಕೃತಿಕ ಸಚಿವ ಎ.ಕೆ ಬಾಲನ್ ಅವರು ಆನ್ ಲೈನ್ ಮೂಲಕ ಲೋಕಾರ್ಪಣೆಗೊಳಿಸಿದರು. ಮಂಜೇಶ್ವರ ಹೊಸಂಗಡಿ ಸಮೀಪ ನಿರ್ಮಿಸಿರುವ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು.
ಸಂಶೋಧಕರಾಗಿದ್ದ ಡಾ. ವೆಂಕಟರಾಜ ಪುಣಿಂಚಿತ್ತಾಯ ಅವರ ಹೆಸರಿನ ಗ್ರಂಥಾಲಯವನ್ನು ಶಾಸಕ ಎಂ. ಸಿ ಕಮರುದ್ದೀನ್, ಸಭಾಂಗಣವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ. ಸಿ ಬಶೀರ್ ಉದ್ಘಾಟಿಸಿದರು. ತುಳು ಲಿಪಿ ಆನ್ ಲೈನ್ ತರಬೇತಿಯ ಉದ್ಘಾಟನೆಯನ್ನು ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಜಿ.ಸಿ ಬಶೀರ್ ನೆರವೇರಿಸಿದರು. ಕೊರೊನಾ ನಿಯಂತ್ರಣ ಕುರಿತ ತುಳು ಸಾಕ್ಷ್ಯ ಚಿತ್ರವನ್ನು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್ ಜಯಾನಂದ ಬಿಡುಗಡೆಗೊಳಿಸಿದರು. ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು, ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.