(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19: ನಗರ ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿರುವ 8 ವರ್ಷ ಪ್ರಾಯದ ಚಿರತೆ ‘ಚಿಂಟು’ಗೆ ಪ್ರಸವ ಸಮಸ್ಯೆಯಿಂದ ಸ್ಥಿತಿ ಗಂಭೀರವಾದ ಕಾರಣ ತುರ್ತಾಗಿ ಶಸ್ತ್ರ ಚಿಕಿತ್ಸೆ ನಡೆಸಿ ಗರ್ಭದಲ್ಲಿದ್ದ ಎರಡು ಮರಿಗಳನ್ನು ಹೊರತೆಗೆಯಲಾಗಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ಪ್ರಕಟನೆ ತಿಳಿಸಿದೆ.
ಶಸ್ತ್ರಚಿಕಿತ್ಸೆಯ ನಂತರ ಚಿರತೆಯು ಚೇತರಿಸುತ್ತಿದ್ದು, ಮೃಗಾಲಯದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಚಿರತೆಯ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಮೃಗಾಲಯದ ವೈದ್ಯಾಧಿಕಾರಿ ಡಾ.ವಿಷ್ಣುದತ್ ಮತ್ತು ಡಾ.ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿರುತ್ತಾರೆ. ಎಂಟು ವರ್ಷಗಳ ಹಿಂದೆ ತಾಯಿಯಿಂದ ಪರಿತಕ್ತವಾದ ಐದು ದಿನಗಳ ಮರಿಯನ್ನು ಮೂಡಬಿದಿರೆ ಸಮೀಪದಿಂದ ರಕ್ಷಿಸಿ ಪಿಲಿಕುಳ ಮೃಗಾಲಯ ದಲ್ಲಿ ‘ಚಿಂಟು’ ಎಂದು ಹೆಸರಿಟ್ಟು ಪೋಷಿಸಿ ಬೆಳೆಸಲಾಗಿದೆ.