(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.19. ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ‘ಮೊಬೈಲ್ ಬಾಂಬ್’ ಹೊಂದಿದ್ದ ಪ್ರಯಾಣಿಕನೊಬ್ಬನನ್ನು ಬಂಧಿಸಲಾಗಿದೆ ಎಂಬ ಸುಳ್ಳು ವದಂತಿ ವಾಟ್ಸ್ಆ್ಯಪ್ ಹಾಗು ಕೆಲವು ಸುದ್ದಿ ವಾಹಿನಿಗಳಲ್ಲಿ ಹರಡಿದ್ದು, ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸಲು ಬಂದಿದ್ದ ವ್ಯಕ್ತಿಯ ಬಳಿ ಇದ್ದ ಪವರ್ ಬ್ಯಾಂಕ್ ಬಗ್ಗೆ ಗೊಂದಲ ಮೂಡಿತ್ತು. ಆದರೆ ವಿಷಯ ಏನೆಂದು ಸ್ಪಷ್ಟವಾಗುವ ಮೊದಲೇ ತೀರ್ಮಾನಕ್ಕೆ ಬಂದಿದ್ದ ಕೆಲವು ದೃಶ್ಯ ಮಾಧ್ಯಮಗಳು “ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ” ಎಂದು ಸುಳ್ಳು ಸುದ್ದಿಯನ್ನು ಹರಡಿ ಬಿಟ್ಟವು. ರಿಪಬ್ಲಿಕ್ ಟಿವಿ ಹಾಗೂ ಟೈಮ್ಸ್ ನೌ ರಾಷ್ಟ್ರೀಯ ಸುದ್ದಿ ವಾಹಿನಿಗಳು ಸುಳ್ಳು ಸುದ್ದಿ ಬಿತ್ತರಿಸಿದ ಕಾರಣ ಈ ಸುಳ್ಳು ಸುದ್ದಿಗಳು ಮಿಂಚಿನ ವೇಗದಲ್ಲಿ ವಾಟ್ಸ್ಆ್ಯಪ್ ನಲ್ಲಿ ಹರಿದಾಡಿದವು.
ಆದರೆ ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್ ತಕ್ಷಣವೇ ಪ್ರತಿಕ್ರಿಯಿಸಿದ್ದು, ಅದು ಸ್ವತಃ ಸಿದ್ಧಮಾಡಿಕೊಂಡ ಪವರ್ ಬ್ಯಾಂಕ್. ಸಮಗ್ರ ವಿಚಾರಣೆ ಬಳಿಕ ವಿಷಯ ಸ್ಪಷ್ಟವಾಗಿ ಪ್ರಯಾಣಿಕನಿಗೆ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ ಎಂದಿದ್ದಾರೆ.