(ನ್ಯೂಸ್ ಕಡಬ) newskadaba.com ಉಡುಪಿ, ಸೆ. 16. ಕಲಾವಿದನೋರ್ವ ಫೋಮ್ ಶೀಟ್ ನಿಂದ ತಯಾರಿಸಿದ ಕೆ.ಎಸ್.ಆರ್.ಟಿ.ಸಿ ಬಸ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಯರ್, ಸ್ಟೇರಿಂಗ್, ಗೇರ್, ಹೆಡ್ ಲೈಟ್, ಲಾಕ್ ಗಳುಳ್ಳ ಬಾಗಿಲು, ಕಿಟಕಿ, ತುರ್ತು ನಿರ್ಗಮನ ಕಿಟಕಿ, ಮಿರರ್ ಸೇರಿದಂತೆ ಎಲ್ಲವೂ ಇವೆ. ಆದರೆ ಈ ಬಸ್ ನಲ್ಲಿ ಪ್ರಯಾಣ ಮಾತ್ರ ಅಸಾಧ್ಯ, ಕಾರಣ ಇದು ನಿಜವಾದ ಬಸ್ಸಲ್ಲ, ಸಣ್ಣ ಗಾತ್ರದ ಆಟಿಕೆಯ ಬಸ್.
ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದ ಕರ್ನಾಟಕ ಸಾರಿಗೆ ಸಂಸ್ಥೆಯ ಐರಾವತ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್ ತದ್ರೂಪಿ. ಇದನ್ನು ನಿರ್ಮಿಸಿದವರು ಪ್ರಶಾಂತ ಆಚಾರ್. ಹೆಮ್ಮಾಡಿ ಸಮೀಪದ ಡೈರಿ ಸರ್ಕಲ್ ನಲ್ಲಿ ಅಣ್ಣನೊಂದಿಗೆ ಓಂಕಾರ್ ಶೀಟ್ ಮೆಟಲ್ ವರ್ಕ್ಸ್ ಶಾಪ್ ನಲ್ಲಿ ಕೆಲಸ ನಿರ್ವಹಿಸುತ್ತಿರುವ ಇವರು, ಕಲಾತ್ಮಕ ವಸ್ತುಗಳನ್ನು ತಯಾರಿಸುವುದರಲ್ಲಿ ಪ್ರವೀಣರು. ಲಾಕ್ ಡೌನ್ ಅವಧಿಯಲ್ಲಿ ಮನೆಯಲ್ಲೇ ಇರುತ್ತಿದ್ದ ಪ್ರಶಾಂತ್ ಆಚಾರ್ ಗೆ ಹೊಸ ತರಹದ ಐಡಿಯಾ ಹೊಳೆದಾಗ ರೂಪುಗೊಂಡಿದ್ದು ಈ ಬಸ್ ಗಳು. ಫೋಮ್ ಶೀಟ್ ತಂದು ಅದರಲ್ಲಿ ಬಸ್ಸಿನ ಬಾಡಿ ವಿನ್ಯಾಸ ತಯಾರಿಸಿ ತಮ್ಮ ಇನ್ನೋರ್ವ ಸಹೋದರ ಓಂಕಾರ್ ಕಾರ್ ಗ್ಯಾರೇಜ್ ನ ಪ್ರಕಾಶ್ ಆಚಾರ್ ಅವರ ಗ್ಯಾರೇಜ್ ನಲ್ಲಿ ಬಸ್ ಗೆ ಪೇಂಟಿಂಗ್ ಮಾಡಿ ಥೇಟ್ ಐರಾವತ ಬಸ್ ನಂತೆ ತಯಾರಿಸಿದ್ದಾರೆ. ಒಂದು ಬಸ್ ತಯಾರಿಕೆಗೆ ವೆಚ್ಚ ಬರೋಬ್ಬರಿ 8-10 ಸಾವಿರ ವೆಚ್ಚ ತಗುಲಿದೆ. ಎಲ್ಲಾ ಬಸ್ ಗಳನ್ನು ಸಂಗ್ರಹಿಸಿ ತಮ್ಮ ಕನಸಿನ ಕುಂದಾಪುರದ ಹೈಟೆಕ್ ಸರ್ಕಾರಿ ಬಸ್ ನಿಲ್ದಾಣವನ್ನು ರಚಿಸುವ ತಯಾರಿಯಲ್ಲಿದ್ದು, ಇನ್ನು ಒಂದು ವರ್ಷದೊಳಗೆ ತಮ್ಮ ಕನಸಿನ ಕುಂದಾಪುರ ಬಸ್ ನಿಲ್ದಾಣವನ್ನು ತಮ್ಮದೇ ಕಲ್ಪನೆಯಲ್ಲಿ ರಚಿಸಲಿದ್ದಾರೆ.