ನೂಜಿಬಾಳ್ತಿಲ ಗ್ರಾ.ಪಂ. ಗ್ರಾಮವಿಕಾಸ ಕಾಮಗಾರಿ ಅಪೂರ್ಣ ➤ ಐದು ವರ್ಷ ಕಳೆದರೂ ದಡ ಸೇರದ ಸಭಾಂಗಣದ ಕಾಮಗಾರಿ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಸೆ. 16. ಸರಕಾರದ ಮಹತ್ವಾಕಾಂಕ್ಷೆಯ ಮುಖ್ಯ ಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿಯಲ್ಲಿ ಕೈಗೆತ್ತಿಕೊಳ್ಳಲಾದ ಸಭಾಂಗಣದ ಕಾಮಗಾರಿ ಸಂಬಂಧಪಟ್ಟವರ ನಿರ್ಲಕ್ಷ್ಯದಿಂದ ಇನ್ನೂ ಪೂರ್ಣಗೊಳ್ಳದೇ ಕಾಮಗಾರಿಯು ನಿಧಾನಗತಿಯಲ್ಲಿ ಸಾಗುತ್ತಿದೆ.

ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತ್ 2015-16ನೇ ಸಾಲಿನ ಮುಖ್ಯ ಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ಸೇರ್ಪಡೆಗೊಂಡು ಗ್ರಾಮದ ಅಭಿವೃದ್ಧಿಗೆ ರೂ. 75 ಲಕ್ಷ ಅನುದಾನ ಬಿಡುಗಡೆಗೊಂಡಿತ್ತು. ಅದರಲ್ಲಿ ರೂ. 18 ಲಕ್ಷದಲ್ಲಿ ನೂಜಿಬಾಳ್ತಿಲ ಗ್ರಾ.ಪಂ. ಕಛೇರಿಯ ಮೇಲ್ಚಾವಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಭಾಂಗಣದ ಕಾಮಗಾರಿ ಕಳೆದ 5 ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ಜತೆಗೆ ಗ್ರಾ.ಪಂ. ಮುಂಭಾಗದಲ್ಲಿ ರೂ. 2.5 ಲಕ್ಷದಲ್ಲಿ ನಡೆಯಬೇಕಾದ ಇಂಟರ್‍ ಲಾಕ್ ಕಾಮಗಾರಿಯೂ ಇನ್ನೂ ಪೂರ್ಣಗೊಂಡಿಲ್ಲ. ನೂಜಿಬಾಳ್ತಿಲ ಗ್ರಾಮದಲ್ಲಿ ಗ್ರಾಮವಿಕಾಸ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾದ ಬಹುತೇಕ ಕಾಮಗಾರಿಗಳಾದ ರಸ್ತೆ ಕಾಂಕ್ರಿಟೀಕರಣ, ತಡೆಗೋಡೆ ಇತರೆ ಕೆಲಸಗಳೂ ಪೂರ್ಣಗೊಂಡಿದ್ದರೂ ಗ್ರಾ.ಪಂ.ನ ಸಭಾಂಗಣ, ಇಂಟರ್‍ಲಾಕ್ ಕಾಮಗಾರಿ ಪೂರ್ಣವಾಗದೇ ಇರುವುದಕ್ಕೆ ಕಾರಣ ಏನೆಂದು ತಿಳಿದು ಬಂದಿಲ್ಲ.

ಅಪೂರ್ಣ ಕಾಮಗಾರಿ;
ಕೆಆರ್‍ಡಿಎಲ್ ಅವರು ಗುತ್ತಿಗೆ ಪಡೆದಿರುವ ಸಭಾಂಗಣದ ಕಾಮಗಾರಿಯೂ ಗ್ರಾ.ಪಂ. ಕಛೇರಿಯ ಮೇಲ್ಭಾಗದಲ್ಲಿ ನಿರ್ಮಾಣವಾಗುತ್ತಿದ್ದು, ಇಲ್ಲಿ ಪಿಲ್ಲರ್ ಹಾಗೂ ಗೋಡೆಗಳ ನಿರ್ಮಾಣ ಕೆಲಸ ಮುಗಿದಿದ್ದು, ಇನ್ನು ಕಾಂಕ್ರೀಟ್ ಕೆಲಸ, ಸಾರಣೆ ಸೇರಿದಂತೆ ಬಹುತೇಕ ಕೆಲಸ ಕಾರ್ಯಗಳು ಅಪೂರ್ಣ ಸ್ಥಿತಿಯಲ್ಲಿದೆ. ಅಲ್ಲದೆ ಗ್ರಾ.ಪಂ. ಮುಂಭಾಗದಲ್ಲಿ ಇಂಟರ್‍ಲಾಕ್ ಅಳವಡಿಸುವ ಕಾಮಗಾರಿಯೂ ನಡೆದಿರುವುದಿಲ್ಲ. ಕಾಮಗಾರಿಗಾಗಿ ಪಂ. ವಠಾರದಲ್ಲಿ ತಂದು ಹಾಕಿರುವ ಮರಳು, ಜಲ್ಲಿ, ಇಟ್ಟಿಗೆ ಕಲ್ಲುಗಳು ರಾಶಿ ಬಿದ್ದಿವೆ.

Also Read  ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಲೆಕ್ಕಾಧಿಕಾರಿ..!

ಲೋಕಾಯುಕ್ತಕ್ಕೆ ದೂರು;
ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ನೂಜಿಬಾಳ್ತಿಲ ಗ್ರಾ.ಪಂ. ಹಾಗೂ ಜಿ.ಪಂ. ಸದಸ್ಯರ ನೇತೃತ್ವದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಅಲ್ಲದೆ ಈ ಬಗ್ಗೆ ಲೋಕಾಯುಕ್ತಕ್ಕೂ ದೂರು ನೀಡಲಾಗಿದೆ. ಗ್ರಾಮದ ಅಭಿವೃದ್ಧಿಗೆ ಸರಕಾರ ಜಾರಿಗೊಳಿಸಿರುವ ಯೋಜನೆಗಳು ಸಂಬಂಧಪಟ್ಟವರ ನಿರ್ಲಕ್ಷದಿಂದ ಕಾಮಗಾರಿ ನಡೆಯದೇ ಇರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಸದ್ಭಳಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಗ್ರಾಮ ವಿಕಾಸ ಯೋಜನೆ;
2015-16ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮಗಳ ಅಭಿವೃದ್ಧಿಗೆ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಗ್ರಾಮ ವಿಕಾಸ ಯೋಜನೆ. ಒಂದು ವಿಧಾನ ಸಭಾ ವ್ಯಾಪ್ತಿಯ 5 ಗ್ರಾಮಗಳನ್ನು ಆಯ್ಕೆ ಮಾಡಿ ರೂ. 75 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಅನುದಾನದಲ್ಲಿ ಗ್ರಾಮವಿಕಾಸ ನಿಯಮಾವಳಿಯಂತೆ ಗ್ರಾಮದ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಬೇಕು. ಈ ಯೋಜನೆಯ ಪ್ರಗತಿಯನ್ನು ಪ್ರತೀ 2 ತಿಂಗಳಿಗೊಮ್ಮೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪರಿಶೀಲಿಸಬೇಕೆಂದೂ ಸೂಚಿಸಲಾಗಿತ್ತು.

Also Read  ಕಡಬದ ಹಿರಿಯ ಬಿಜೆಪಿ ಮುಖಂಡ ಮನವಳಿಕೆ ಉಮೇಶ್ ರೈ ಇನ್ನಿಲ್ಲ

ಕೋಟ್ – 1
ನೂಜಿಬಾಳ್ತಿಲ ಪಂ.ನ ಸಭಾಂಗಣ ಕಾಮಗಾರಿ ಪೂರ್ಣಗೊಳಿಸುವಂತೆ ನಾವು ಅನೇಕ ಬಾರೀ ಒತ್ತಡ ತಂದಿದ್ದೇವೆ. ಅಲ್ಲದೇ ಜಿ.ಪಂ.ಗೂ ಸಂಬಂಧಿಸಿದವರ ಮೇಲೆ ದೂರು ನೀಡಿದ್ದೇವೆ. ಕಾಮಗಾರಿ ಇಂತಿಷ್ಟು ಸಮಯದಲ್ಲಿ ಪೂರ್ಣಗೊಳಿಸಬೇಕು ಎಂಬ ನಿಯಮ ಇಲ್ಲದೇ ಇರುವುದೇ ಇದಕ್ಕೆ ಕಾರಣ.
;- ಪಿ.ಪಿ.ವರ್ಗೀಸ್ ಜಿ.ಪಂ. ಸದಸ್ಯರು
ಕಡಬ ಕ್ಷೇತ್ರ

ಕೋಟ್ – 2
ಕೆಲಸ ನಿರ್ವಹಿಸಲು ಸೂಚನೆ;
ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯ ನಿರ್ಲಕ್ಷದಿಂದ ಕಾಮಗಾರಿ ಅಪೂರ್ಣಗೊಂಡಿದ್ದು, ಒಂದು ವಾರದ ಸಮಯಾವಕಾಶ ನೀಡಲಾಗಿದ್ದು, ಬಳಿಕವೂ ಕೆಲಸ ಪ್ರಾರಂಭಿಸದಿದ್ದಲ್ಲಿ ಬೇರೆಯವರಿಗೆ ಕೆಲಸ ಮುಂದುವರಿಸಲು ಸೂಚಿಸಿ, ಒಂದು ವಾರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು.
;- ರಮೇಶ್ ಕುಮಾರ್ ಇಂಜಿನಿಯರ್

 

ವರದಿ: ದಯಾನಂದ ಕಲ್ನಾರ್

error: Content is protected !!
Scroll to Top