(ನ್ಯೂಸ್ ಕಡಬ) newskadaba.com ರಾಯಚೂರು, ಸೆ. 15. ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ರಾಯಚೂರು ಇದರ ವತಿಯಿಂದ ಚಿಣ್ಣರ ರವಿವಾರ ಮಕ್ಕಳ ಸಾಹಿತ್ಯ ಸಂಭ್ರಮ ಸರಣಿಯ ಅಂಗವಾಗಿ, ಪರಿಸರ ಮಹತ್ವವನ್ನು ಬಿತ್ತರಿಸುವ ಸಲುವಾಗಿ ರಾಜ್ಯ ಮಟ್ಟದ ಹಸಿರು ಕವಿಗೋಷ್ಠಿ ಸ್ಪರ್ಧೆಯನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಇದರಲ್ಲಿ ಇದೀಗ ದಕ್ಷಿಣ ಕನ್ನಡದ ಕಡಬ ತಾಲೂಕು ನೂಜಿಬಾಳ್ತಿಲದ ಸಮ್ಯಕ್ತ್. ಹೆಚ್. ಜೈನ್ ರವರು ಸ್ಪರ್ಧಾ ಸ್ಫೂರ್ತಿಯಿಂದ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಸಂಸ್ಥೆಯಿಂದ ಕೊಡಲ್ಪಡುವ ಪ್ರಶಸ್ತಿಗೆ ಭಾಜನರಾಗಿರುತ್ತಾರೆ. ತಮ್ಮ ಊರಿನ ಹೆಸರನ್ನು ರಾಜ್ಯ ಮಟ್ಟದಲ್ಲಿ ಮಿಂಚುವಂತೆ ಮಾಡುತ್ತಿರುವ ಇವರು ಯುವ ಸಾಹಿತಿಯಾಗಿ ಗುರುತಿಸಿಕೊಂಡಿದ್ದು, ರಾಜ್ಯ ,ಅಂತರ್ರಾಜ್ಯ ಮಟ್ಟದಲ್ಲೂ ಅಪೂರ್ವ ಸಾಧನೆಗೈದಿದ್ದಾರೆ. ಯುವ ಚಿಂತಕ, ಪ್ರಭಾವಿ ಕವಿ, ಲೇಖಕ, ವಾಗ್ಮಿ, ವಿಮರ್ಶಕರಾಗಿರುವ ಇವರು, ಈವರೆಗೆ ಮೂರು ಕವನ ಸಂಕಲನವನ್ನು ಬರೆದು ಬಿಡುಗಡೆಗೊಳಿಸಿ , ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ.
ಇವರು ನೂಜಿಬಾಳ್ತಿಲ ಹೊಸಂಗಡಿ ಬಸದಿ ಶ್ರೀ ಧರಣೇಂದ್ರ ಮತ್ತು ಶ್ರೀಮತಿ ಮಂಜುಳಾರವರ ಸುಪುತ್ರ.