(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಸೆ. 15. ಐದು ತಿಂಗಳ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಸೇವೆಗಳು ಆರಂಭಗೊಂಡಿದ್ದು, ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದುಬಂತು. ಕೊವೀಡ್ 19 ಮಾರ್ಗ ಸೂಚಿಗೆ ಅನುಗುಣವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಸೇರಿದಂತೆ ಇತರ ಸೇವೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ.
ಭಕ್ತರು ದೈಹಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ರಾತ್ರಿ 8 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರದ ಪ್ರಮುಖ ಸೇವೆ ಸರ್ಪಸಂಸ್ಕಾರವನ್ನು ದಿನಕ್ಕೆ 30ರಂತೆ ನೆರವೇರಿಸಲು ಅವಕಾಶವಿದ್ದು, ಮೊದಲ ದಿನ ನಾಲ್ಕು ಸೇವೆ ನಡೆದಿದೆ.ಪ್ರತಿ ಸೇವೆಗೆ ಕುಟುಂಬದ ಇಬ್ಬರು ಮಾತ್ರ ಭಾಗವಹಿಸಬಹುದು. ಈ ಭಕ್ತರಿಗೆ ದೇವಳದಿಂದ ಕೊಠಡಿ ವ್ಯವಸ್ಥೆ ಮಾಡಲಾಗಿದ್ದು, 2 ದಿನ ಉಳಿಯಲು ಅವಕಾಶವಿದೆ.ಕ್ಷೇತ್ರದ ಮತ್ತೊಂದು ಪ್ರಮುಖ ಸೇವೆ ಆಶ್ಲೇಷ ಬಲಿಯನ್ನು ಎರಡು ಪಾಳಿಯಲ್ಲಿ ಭಕ್ತರು ನೆರವೇರಿಸಿದರು.
ಸಾಯಂಕಾಲ ನಡೆಯುತ್ತಿದ್ದ ಆಶ್ಲೇಷ ಬಲಿ ಸೇವೆ ಸದ್ಯ ಸ್ಥಗಿತಗೊಂಡಿದೆ.ನಾಗಪ್ರತಿಷ್ಠೆ 12, ಇಡೀ ದಿನದ ಮಹಾಪೂಜೆ 7, ಮಧ್ಯಾಹ್ನದ ಮಹಾಪೂಜೆ 7, ಕಲಶ ಪೂಜಾಯುಕ್ತ ಪಂಚಾಮೃತಾಭಿಷೇಕ 10, ಪವಮಾನಯುಕ್ತ ಪಂಚಾಮೃತಾಭಿಷೇಕ 10, ರುದ್ರಾಭಿಷೇಕ 17, ಪಂಚಾಮೃತಾಭಿಷೇಕ 27, ಕಾರ್ತಿಕ ಪೂಜೆ 338 ನಡೆಯಿತು. ಭಕ್ತರಿಗೆ ಹಾಳೆ ತಟ್ಟೆ ಮೂಲಕ ಬಫೆ ಮಾದರಿಯಲ್ಲಿ ಅನ್ನಪ್ರಸಾದ ವಿತರಿಸಲಾಗಿದ್ದು, ಸುಮಾರು ಮೂರು ಸಾವಿರ ಮಂದಿ ಸೋಮವಾರ ಭೋಜನ ಸ್ವೀಕರಿಸಿದರು. ಬಳಿಕ ಭೋಜನ ಶಾಲೆಯ ಸ್ಯಾನಿಟೈಸೇಶನ್, ಸ್ವಚ್ಛತೆ ಕಾರ್ಯ ನಡೆಸಲಾಗಿದೆ.