(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 15. ಕೊರೋನಾ ಗೊಂದಲದ ನಡುವೆ ಶಾಲಾ- ಕಾಲೇಜುಗಳ ಆರಂಭಕ್ಕೆ ತಯಾರಿ ನಡೆಯುತ್ತಿದೆ.
9 ರಿಂದ 12ನೆ ತರಗತಿವರೆಗಿನ ವಿದ್ಯಾರ್ಥಿಗಳು ಸೆ. 21ರಿಂದ ಶಾಲಾ- ಕಾಲೇಜುಗಳಿಗೆ ತೆರಳುವಂತೆ ಅನುಮತಿ ನೀಡಿ ಶಾಲೆಗಳನ್ನು ಪುನರಾರಂಭಿಸಲು ಸಿದ್ಧತೆಗಳು ನಡೆದಿದೆ.
ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ಆರಂಭಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತಿದ್ದು, ಕೇಂದ್ರ ಸರ್ಕಾರದ ಅನುಮತಿಯ ಮೇರೆಗೆ ಶಾಲಾ-ಕಾಲೇಜು ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಮಕ್ಕಳನ್ನು ಶಾಲೆಗೆ ಹೋಗುವಂತೆ ಒತ್ತಾಯ ಹೇರುವಂತಿಲ್ಲ, ಶಾಲೆಗೆ ಬರುವ ಪ್ರತೀ ವಿದ್ಯಾರ್ಥಿಯ ಹೆತ್ತವರಿಂದ ಒಪ್ಪಿಗೆ ಪತ್ರ ತರಬೇಕು. ವಿದ್ಯಾರ್ಥಿಗಳು ಸಾಮಾಜಿಕ ಅಂತರ ಕಾಪಾಡುವಂತೆ ತರಗತಿಯಲ್ಲಿ ವ್ಯವಸ್ಥೆ ಮಾಡಬೇಕು. ಪ್ರತೀದಿನ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ನಡೆಸಿ, ಮಕ್ಕಳು ಹಾಗೂ ಸಿಬ್ಬಂದಿಗಳು ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ಪ್ರತಿ ತರಗತಿ ಕೋಣೆಗಳನ್ನು ಪ್ರತಿನಿತ್ಯ ಸ್ಯಾನಿಟೈಸ್ ಮಾಡಬೇಕು, ಶಾಲಾ ಆವರಣದಲ್ಲಿ ಮಕ್ಕಳು ಗುಂಪು ಕಟ್ಟದಂತೆ ಎಚ್ಚರ ವಹಿಸಬೇಕು.
ಲೈಬ್ರರಿಯಲ್ಲಿ ಹೆಚ್ಚು ಮಕ್ಕಳು ಸೇರುವಂತಿಲ್ಲ. ಗುಂಪು ಕ್ರೀಡೆಗೆ ಅವಕಾಶವಿಲ್ಲ. ಮಕ್ಕಳು ಶಾಲೆಗೆ ಬರುವಾಗ, ಹೋಗುವಾಗ ಸಾಮಾಜಿಕ ಅಂತರದಲ್ಲಿರುವಂತೆ ಕ್ರಮ ವಹಿಸುವುದು, ಶಾಲಾ ಸಿಬ್ಬಂದಿ ಮಾಸ್ಕ್, ಗ್ಲೌಸ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿದೆ. ಇದು ಇನ್ನು ಎರಡು ಮೂರು ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.