ಬ್ಯಾರಿ ಭಾಷೆಗೆ ಸ್ವಂತ “ಬ್ಯಾರಿ ಲಿಪಿ” ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11. ದ್ರಾವಿಡ ಭಾಷೆಯಾದ ಬ್ಯಾರಿ ಕಳೆದ ಹಲವು ಶತಮಾನಗಳಿಂದ ಕರಾವಳಿ ಕರ್ನಾಟಕ ಮತ್ತು ಉತ್ತರ ಕೇರಳದ ಕರಾವಳಿ ಪ್ರದೇಶಗಳಲ್ಲಿ ಸುಮಾರು ಇಪ್ಪತ್ತು ಲಕ್ಷದಷ್ಟು ಜನರ ಮಾತೃ ಭಾಷೆಯಾಗಿ ಹಾಗೂ ವ್ಯಾವಹಾರಿಕ ಭಾಷೆಯಾಗಿ ತನ್ನ ಅನನ್ಯತೆ, ವಿಶಿಷ್ಟತೆ ಮತ್ತು ಸರಳ ಪದವಿನ್ಯಾಸಗಳಿಂದ ಜನರ ನಡುವಿನ ಸಂಪರ್ಕ ಕೊಂಡಿಯಾಗಿ ಅಚ್ಚಳಿಯದೆ ಉಳಿದಿದೆ. ತನ್ನದೇ ಆದ ಧ್ವನಿ ವ್ಯವಸ್ಥೆ ಹೊಂದಿರುವ ಬ್ಯಾರಿ ಭಾಷೆ ತುಳು, ಮಲಯಾಳಂ, ಕನ್ನಡ, ಕೊಂಕಣಿ, ಕೊಡವ ಮೊದಲಾದ ಭಾಷೆಗಳೊಂದಿಗೆ ಭಾಷಾ ಸಾಮರಸ್ಯದ ಕೊಂಡಿಯಾಗಿಯೂ ಹಲವು ಶತಮಾನಗಳಿಂದ ಸಂಬಂಧವನ್ನು ಹೊಂದಿದೆ. ವಿಶಿಷ್ಟ ಪದಬಳಕೆ, ಸುಲಲಿತ ಮನವರಿಕೆಯ ಗುಣಗಳಿಂದಾಗಿ ಆಂಗ್ಲಭಾಷಾ ಮಾಧ್ಯಮ ಕಲಿಕಾಸಕ್ತಿಯ ನಡುವೆಯೂ ಮನೆ ಮತ್ತು ವ್ಯವಹಾರಗಳಲ್ಲಿ ಇಂದಿಗೂ ಬಹುದೊಡ್ಡ ಸಂಖ್ಯೆಯ ಬ್ಯಾರಿ ಮತ್ತು ಬ್ಯಾರಿಯೇತರ ಜನರ ದಿನನಿತ್ಯದ ಆಡುಭಾಷೆಯಾಗಿ ಅಸ್ತಿತ್ವವನ್ನು ಉಳಿಸಿಕೊಂಡಿರುವ ಬ್ಯಾರಿ ಭಾಷೆಯಲ್ಲಿ ಇಂದು ವಿಪುಲ ಸಾಹಿತ್ಯ ಚಟುವಟಿಕೆ ನಡೆಯುತ್ತಿವೆ.


ಬ್ಯಾರಿ ಭಾಷೆಯ ಸಾಹಿತ್ಯ, ಶೈಕ್ಷಣಿಕ ಬೆಳವಣಿಗೆಗಾಗಿ ಆರಂಭವಾದ 90ರ ದಶಕದ ಬ್ಯಾರಿ ಆಂದೋಲನಗಳು, ಸಾಹಿತ್ಯ ಸಮ್ಮೇಳನಗಳಿಂದಾಗಿ, ಬ್ಯಾರಿ ಭಾಷೆಯನ್ನು ಹೊರ ಜಗತ್ತು ಗುರುತಿಸುವಂತಾಯಿತು. ಅಂದಿನ ಕರ್ನಾಟಕ ಸರಕಾರ 2007 ರಲ್ಲಿ ಈ ಭಾಷೆಯ ಅನನ್ಯತೆಯನ್ನು ಮನಗಂಡು ನೀಡಿದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಬ್ಯಾರಿ ಭಾಷೆಯ ಬೆಳವಣಿಗೆಗೆ ಅಪೂರ್ವ ಅವಕಾಶವನ್ನು ನೀಡಿತು. ಈ ನಡುವೆ ನೂರಾರು ಬರಹಗಾರರು ಬ್ಯಾರಿ ಭಾಷೆಯಲ್ಲಿ ಗದ್ಯ, ಪದ್ಯಗಳನ್ನು, ಕನ್ನಡ ಲಿಪಿಯ ಮೂಲಕ ರಚಿಸಿ ಬ್ಯಾರಿ ಭಾಷೆಯನ್ನು ಶ್ರೀಮಂತಗೊಳಿಸಿದರು. ಬ್ಯಾರಿ ಸಾಹಿತ್ಯ ಅಕಾಡೆಮಿಯು ಈ ಹಿಂದಿನ ಅವಧಿಗಳಲ್ಲಿ ಬ್ಯಾರಿ ಭಾಷಾನಿಘಂಟು, ಬ್ಯಾರಿಭಾಷಾ ವ್ಯಾಕರಣ ಗ್ರಂಥಗಳನ್ನು ರಚಿಸುವ ಮೂಲಕ ಈ ಭಾಷೆಗೆ ಶೈಕ್ಷಣಿಕ (ಅಕಾಡೆಮಿಕ್) ಮತ್ತು ಸಾಹಿತ್ಯಿಕ ಮಹತ್ವ ಸಿಗುವಂತೆ ಮಾಡಿದೆ.

Also Read  ವಿದ್ಯಾರ್ಥಿಗಳಿಗೆ ವಿಶೇಷ ಕ್ರೀಡಾ ತರಬೇತಿ ಶಿಬಿರ

ಬ್ಯಾರಿ ಭಾಷೆಯನ್ನು ರಾಜ್ಯದ ವಿದ್ಯಾರ್ಥಿಗಳು ತೃತೀಯ ಭಾಷೆಯಾಗಿ ಐಚ್ಚಿಕವಾಗಿ ಕಲಿಯಲು ಅವಕಾಶ ಮಾಡಿಕೊಡುವ ಪ್ರಯತ್ನವೂ ಸಾಗಿದೆ. ಇದೀಗ ಈ ಬ್ಯಾರಿ ಭಾಷೆಗೆ ತನ್ನದೇ ಆದ ಲಿಪಿ ಇಲ್ಲ ಎಂಬ ಕೊರತೆಯನ್ನು ನೀಗಿಸಿ ಈ ಭಾಷೆಯನ್ನು ಭಾಷಾ ಜಗತ್ತಿಗೆ ಸ್ವತಂತ್ರ ಮತ್ತು ಅನನ್ಯತೆಯ ಅಸ್ಮಿತೆಯೊಂದಿಗೆ ಪರಿಚಯಿಸುವ ಸಲುವಾಗಿ ಬ್ಯಾರಿ ಭಾಷೆಗೆ ಸ್ವತಂತ್ರವಾದ ಲಿಪಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ರಚಿಸಿದ್ದು ಈ ಮೂಲಕ ಭಾಷಾಜಗತ್ತಿಗೆ ಬ್ಯಾರಿ ಭಾಷಾ ಲಿಪಿಯನ್ನು ಈ ದಿನ ಸಮರ್ಪಿಸುತ್ತಿದ್ದೇವೆ. ಇದು ಒಂದು ಐತಿಹಾಸಿಕ ಬೆಳವಣಿಗೆ ಎಂದೇ ಅಕಾಡೆಮಿಯು ಪರಿಗಣಿಸುತ್ತದೆ. ಕಳೆದ ಹತ್ತು ವರ್ಷಗಳಿಂದ ಬ್ಯಾರಿ ಭಾಷೆಗೆ ಸ್ವತಂತ್ರ ಲಿಪಿ ರಚಿಸುವ ಪ್ರಯತ್ನಗಳು ನಡೆದಿದ್ದವು. ಅಬ್ದುಲ್ ಸಮದ್ ಬಾವಾ ಪುತ್ತೂರು, ಡಾ| ಮುಹಮ್ಮದ್ ಫೌಝೀದ್ ಕಲ್ಲಿಕೋಟೆ, ಕೇರಳ ಇವರು ಲಿಪಿ ರಚನೆಯ ಬಗ್ಗೆ ಆಸಕ್ತಿ ಹೊಂದಿದ್ದು ಅದನ್ನು ಅಕಾಡೆಮಿ ಮೂಲಕ ಪರಿಚಯಿಸುವ ಪ್ರಯತ್ನ ಮಾಡಿದ್ದರು. ಇದೀಗ ಕಳೆದ ವರ್ಷ ನೂತನವಾಗಿ ನೇಮಕಗೊಂಡ ಅಕಾಡೆಮಿಯ ಸಮಿತಿಯು ಲಿಪಿಯ ಬಗ್ಗೆ ವಿಶೇಷ ಆಸಕ್ತಿಯನ್ನು ತಾಳಿ ಗಂಭೀರ ಕಾರ್ಯಯೋಜನೆಯಾಗಿ ಪರಿಗಣಿಸಿ ಬ್ಯಾರಿ ಲಿಪಿ ರಚನೆ, ಸಂಶೋಧನೆ, ಪರಿಶೀಲನೆ ಅದರ ಅಂಗೀಕಾರ ಮತ್ತು ಅನುಷ್ಠಾನ ಸಮಿತಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಅವರ ಅಧ್ಯಕ್ಷತೆಯಲ್ಲಿ ರಚಿಸಿತು. ವಿದ್ವಾಂಸ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಸಹ ಪ್ರಾಧ್ಯಾಪಕ ಡಾ| ಅಬೂಬಕ್ಕರ್ ಸಿದ್ದೀಕ್, ಸಹಾಯಕ ಪ್ರಾಧ್ಯಾಪಕ ಹೈದರ್ ಅಲಿ, ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಸಂಪಾದಕ ಎ. ಕೆ ಕುಕ್ಕಿಲ, ಡಾ| ಮುಹಮ್ಮದ್ ಫೌಝೀದ್ ಕಲ್ಲಿಕೋಟೆ, ಅಬ್ದುಲ್ ಸಮದ್ ಬಾವಾ ಪುತ್ತೂರು, ಸಾಹಿತಿ ಅಬ್ದುಲ್ ರಹಿಮಾನ್ ಕುತ್ತೆತ್ತೂರು, ಪತ್ರಕರ್ತ ಹಂಝ ಮಲಾರ್ ಇವರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ನಿರಂತರ ಪರಿಶ್ರಮದ ಫಲವಾಗಿ ಹಲವು ಸುತ್ತಿನ ಚರ್ಚೆ, ಪರಿಶೀಲನೆ, ಪರಿಷ್ಕರಣೆಯ ಬಳಿಕ ಬ್ಯಾರಿ ಭಾಷಾ ಲಿಪಿಯನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯು ಅಂಗೀಕರಿಸಿದ್ದು ಭಾಷಾ ಜಗತ್ತಿಗೆ ಹೊಸ ಬ್ಯಾರಿ ಲಿಪಿಯೊಂದನ್ನು ಪರಿಚಯಿಸಲು ಹೆಮ್ಮೆ ಪಡುತ್ತಿದೆ.

Also Read  ಕರ್ನಾಟಕ ವಿಶೇಷ ಒಲಿಂಪಿಕ್ಸ್ ವತಿಯಿಂದ ► ರಾಜ್ಯ ಕ್ರೀಡಾ ತರಬೇತುದಾರ ಪ್ರಭಾಕರ್ ಮರ್ಕಂಜರವರಿಗೆ ಸನ್ಮಾನ

ಬ್ಯಾರಿ ಲಿಪಿಯ ಬಳಕೆ, ವೈಶಿಷ್ಟ್ಯತೆ:  ಬ್ಯಾರಿ ಲಿಪಿಯಲ್ಲಿ 13 ಸ್ವರಾಕ್ಷರಗಳು, 25 ವರ್ಗೀಯ ವ್ಯಂಜನಗಳು, 8 ಅವರ್ಗೀಯ ವ್ಯಂಜನಾಕ್ಷರಗಳು ಸೇರಿದಂತೆ ಒಟ್ಟು 46 ಅಕ್ಷರಗಳು ಇದೆ.  ಬ್ಯಾರಿ ಸ್ವರಾಕ್ಷರಗಳಲ್ಲಿ ದೀರ್ಘಸ್ವರಗಳನ್ನು ಒಂದು ಸರಳ ಸಂಕೇತದ ಮೂಲಕ ಬಳಸಲಾಗುತ್ತಿದೆ. ಬ್ಯಾರಿ ಭಾಷೆಯಲ್ಲಿ ಮಹಾಪ್ರಾಣಗಳ ಬಳಕೆ ಇರುವುದಿಲ್ಲ ಆದಾಗ್ಯೂ ಕನ್ನಡ ಮತ್ತು ಇತರ ಭಾಷೆಗಳಿಂದ ಬರಹವನ್ನು ಯಥಾವತ್ತಾಗಿ ಬ್ಯಾರಿ ಭಾಷೆಗೆ ತರಬೇಕಾದಲ್ಲಿ ಮಹಾಪ್ರಾಣ ಅಗತ್ಯವಾಗಿರುವುದರಿಂದ ಬ್ಯಾರಿ ಲಿಪಿಯಲ್ಲಿ ಮಹಾಪ್ರಾಣಗಳನ್ನು ಸರಳವಾಗಿ ಎರಡು ಚುಕ್ಕಿ ಚಿಹ್ನೆಗಳ ಮೂಲಕ ಗುರುತಿಸಬಹುದಾಗಿದೆ.
ಬ್ಯಾರಿ ಭಾಷೆಯಲ್ಲಿ ಙ, ಞ, ಝ ಅದೇ ರೀತಿ ಅï ಸ್ವರಾಂತ್ಯ ಪದಗಳ ಬಳಕೆ ಹೆಚ್ಚಿರುತ್ತದೆ.  ಎರಡು ಯೋಗವಾಹ ಪೈಕಿ ಅನುಸ್ವಾರವನ್ನು (ಅಂ) ಯಥಾವತ್ತಾಗಿ ಬಳಸಲಾಗಿದೆ. ಕನ್ನಡದ ವಿಶಿಷ್ಟವಾದ ಅರ್ಕ ಒತ್ತನ್ನು ಬ್ಯಾರಿ ಭಾಷೆಯಲ್ಲಿ ಬದಲಾವಣೆಯೊಂದಿಗೆ ಮತ್ತು ‘ರೃ”(ಋ) ಒತ್ತಕ್ಷರವನ್ನು ಯಥಾವತ್ತಾಗಿ ಬಳಸಲಾಗಿದೆ. ಬ್ಯಾರಿ ಲಿಪಿಯ ಅಕ್ಷರಗಳು ವಿಶಿಷ್ಟ ಮತ್ತು ಕಲಿಕಾ ಸ್ನೇಹಿಯಾಗಿದೆ. ಎಲ್ಲಾ ವ್ಯಂಜನಗಳಿಗೆ ಕಾಗುಣಿತ ಮತ್ತು ಒತ್ತಕ್ಷರಗಳನ್ನು ಗುರುತಿಸಲಾಗಿದೆ. ಕನ್ನಡ ವರ್ಣಮಾಲೆಯಲ್ಲಿ ಮೂರು ಸ, ಷ, ಶ ಅಕ್ಷರಗಳಿದ್ದರೆ ಬ್ಯಾರಿ ಭಾಷೆಯಲ್ಲಿ ಶ ಮತ್ತು ಸ ಮಾತ್ರ ಬಳಕೆಯಲ್ಲಿದ್ದು ಈ ಎರಡು ಅಕ್ಷರಗಳನ್ನು ಒಂದೇ ‘ಸ’ ಎಂಬ ಅಕ್ಷರದಿಂದ ಸರಳೀಕೃತ ವಿಧಾನದ ಮೂಲಕ ಗುರುತಿಸಲಾಗಿದೆ. ಲಿಪಿಯ ಜೊತೆಯಲ್ಲಿ ಸೊನ್ನೆಯಿಂದ ಒಂಬತ್ತರವರೆಗಿನ ಅಂಕೆಗಳನ್ನು ಮತ್ತು ಜನವರಿಯಿಂದ ದಶಂಬರವರೆಗಿನ 12 ತಿಂಗಳುಗಳಿಗೆ ತತ್ಸಮಾನವಾದ ಬ್ಯಾರಿ ತಿಂಗಳುಗಳ ಹೆಸರುಗಳನ್ನು ಕೂಡಾ ಬ್ಯಾರಿ ಭಾಷಾ ಜಗತ್ತಿಗೆ ಈ ಮೂಲಕ ಪರಿಚಯಿಸಲಾಗುತ್ತಿದೆ.

Also Read  ಕರ್ನಾಟಕದ ಬೀಚ್ ಗಳಲ್ಲಿ ಟೆಂಟ್-ಮದ್ಯಪಾನ ಪಾರ್ಟಿಗೆ ಅವಕಾಶ-ಶೀಘ್ರ ತೀರ್ಮಾನ

error: Content is protected !!
Scroll to Top