(ನ್ಯೂಸ್ ಕಡಬ) newskadaba.com ಉಡುಪಿ, ಸೆ.11. ಕೃಷ್ಣಮಠದಲ್ಲಿ ಕೃಷ್ಣ ಜನ್ಮಾಷ್ಟಮಿಯ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿದ್ದು, ಮಧ್ಯರಾತ್ರಿ 12:16ಕ್ಕೆ ಕೃಷ್ಣನಿಗೆ ಅರ್ಘ್ಯ ಸಮರ್ಪಿಸಲಾಯಿತು.
ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ರಾತ್ರಿ ತುಳಸಿ ಅರ್ಚನೆ ಹಾಗೂ ಮಹಾಪೂಜೆ ನೆರವೇರಿಸಿ ಗರ್ಭಗುಡಿಯಲ್ಲಿ ಕೃಷ್ಣದೇವರಿಗೆ ಅರ್ಘ್ಯ ಅರ್ಪಿಸಿದರು. ಬಳಿಕ ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರತೀರ್ಥರು, ಅದಮಾರು ಮಠಾಧೀಶರಾದ ವಿಶ್ವಪ್ರಿಯತೀರ್ಥರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥರು ಕೃಷ್ಣನಿಗೆ ಹಾಗೂ ಚಂದ್ರೋದಯ ಸಮಯದಲ್ಲಿ ತುಳಸೀಕಟ್ಟೆಯಲ್ಲಿ ಚಂದ್ರನಿಗೆ ಅರ್ಘ್ಯ ಸಮರ್ಪಿಸಿದರು. ಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಧಾರ್ಮಿಕ ವಿಧಿವಿಧಾನಗಳಲ್ಲಿ ಅರ್ಘ್ಯ ಸಮರ್ಪಣೆ ಮುಖ್ಯವಾದುದು. ಶುಕ್ರವಾರ ಮಧ್ಯಾಹ್ನ ರಥ ಬೀದಿಯಲ್ಲಿ ವಿಟ್ಲಪಿಂಡಿ ಉತ್ಸವ ನಡೆಯಲಿದೆ.