ವಿದ್ಯಾಕುಂಜವಾಗಿ ಬೆಳೆಯುತ್ತಿರುವ ‘ರಾಮಕುಂಜ’ ➤ ವಿವಿಧ ವಿಭಾಗದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ

(ನ್ಯೂಸ್ ಕಡಬ) newskadaba.com ವಿದ್ಯಾಕುಂಜವಾಗಿ ಬೆಳೆಯುತ್ತಿರುವ ರಾಮಕುಂಜದಲ್ಲಿ, ಇದೀಗ ಒಂದನೇ ತರಗತಿಯಿಂದ ಪದವಿ ತನಕದ ವ್ಯಾಸಂಗ ದೊರೆಯುತ್ತಿದೆ.

1919ರಲ್ಲಿ ಊರಿನ ಹಿರಿಯರು ಶ್ರೀ ರಾಮಕುಂಜೇಶ್ವರ ದೇವಾಲಯದ ಆವರಣದಲ್ಲಿ ವೇದ ಪಾಠಶಾಲೆ ಹಾಗೂ ಸಂಸ್ಕೃತ ಪಾಠಶಾಲೆಯನ್ನು ಆರಂಭಿಸಿದರು. ಉಡುಪಿಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರವರ ಹುಟ್ಟೂರು ರಾಮಕುಂಜ ಹಾಗೂ ಇದೇ ಸಂಸ್ಥೆಯಲ್ಲಿ ತಮ್ಮ 8ನೇಯ ವಯಸ್ಸಿನವರೆಗೆ ವಿದ್ಯಾಭ್ಯಾಸವನ್ನು ಶ್ರೀಗಳು ಪಡೆದುಕೊಂಡಿದ್ದಾರೆ. ಮುಂದೆ ಪ್ರಾಥಮಿಕ ಶಾಲೆ, ಓರಿಯೆಂಟಲ್ ಹೈಸ್ಕೂಲ್, ಪದವಿಪೂರ್ವ ಕಾಲೇಜು, ಆಂಗ್ಲ ಮಾಧ್ಯಮ ಪ್ರೌಢಶಾಲೆ, ಪ್ರಥಮ ದರ್ಜೆ ಕಾಲೇಜು, ಕಂಪ್ಯೂಟರ್ ಶಿಕ್ಷಣ ಕೇಂದ್ರ ಹೀಗೆ ಆಧುನಿಕ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳನ್ನು ಕಟ್ಟಿ ಬೆಳೆಸುತ್ತಾ ಬಂದಿರುವುದು ಇತಿಹಾಸ. ರಾಮಕುಂಜದಲ್ಲಿ 1984ರಲ್ಲಿ ಪದವಿಪೂರ್ವ ಕಾಲೇಜು ಆರಂಭವಾಯಿತು. ಆಡಳಿತ ಮಂಡಳಿಯಾಗಿರುವ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಕಳೆದ 35 ವರ್ಷಗಳಲ್ಲಿ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳನ್ನು ವ್ಯವಸ್ಥೆ ಮಾಡಿದ್ದು, ಅತ್ಯುತ್ತಮ ದಾಖಲೆಯ ಫಲಿತಾಂಶದೊಂದಿಗೆ ಕಾಲೇಜು ಮುನ್ನಡೆಯುತ್ತಿದೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ ಸಂಯೋಜನೆಗಳು, ವಾಣಿಜ್ಯ ವಿಭಾಗದಲ್ಲಿ ಎಸ್ಇಬಿಎ, ಸಿಇಬಿಎ, ಎಚ್ಇಬಿಎ ಸಂಯೋಜನೆಗಳು ಹಾಗೂ ಕಲಾವಿಭಾಗದಲ್ಲಿ ಹೆಚ್ಇಪಿಎಸ್ ಸಂಯೋಜನೆಗಳಿವೆ. ವಿಶಾಲವಾದ ಕ್ರೀಡಾಂಗಣವಿದ್ದು, ನೂರಾರು ವಿದ್ಯಾರ್ಥಿಗಳು ಉತ್ತಮ ತರಬೇತಿ ಹೊಂದಿ ಜಿಲ್ಲಾ, ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಸಂಗೀತ, ನೃತ್ಯ, ಯಕ್ಷಗಾನ ಇತ್ಯಾದಿಗಳಲ್ಲೂ ವಿಶೇಷ ತರಬೇತಿಗಳಿವೆ. ವಿದ್ಯಾರ್ಥಿಗಳ ಸೃಜನಶೀಲತೆಯನ್ನು ಬೆಳೆಸಲು ಸಾಂಸ್ಕೃತಿಕ ಸಂಘದ ವಿವಿಧ ಚಟುವಟಿಕೆಗಳಿವೆ. ಉತ್ತಮ ಪ್ರಯೋಗಾಲಯವಿದ್ದು, ವಿದ್ಯಾರ್ಥಿಗಳಿಗೆ ಪಠ್ಯ ಪೂರಕ ಮಾದರಿ ತಯಾರಿಕೆ, ವಿಶೇಷ ಅವಿಷ್ಕಾರಗಳ ಪ್ರಾಜೆಕ್ಟ್’ಗಳ ತಯಾರಿಕೆ ಮಾಡುವಲ್ಲಿ ಪ್ರೋತ್ಸಾಹ ನೀಡಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಬಂದು ವಸತಿ ನಿಲಯದ ಸೌಲಭ್ಯವನ್ನು ಬಳಸಿಕೊಂಡು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಎನ್ಇಇಟಿ, ಸಿಇಟಿ ಕೋಚಿಂಗ್ ನ್ನು ಸಂಸ್ಥೆಯಲ್ಲಿ ನೀಡಲಾಗುತ್ತಿದೆ. ಎಲ್ಲಾ ಆರ್ಥಿಕ ಹಾಗೂ ಸಾಮಾಜಿಕ ವರ್ಗದ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ವಿದ್ಯಾಭ್ಯಾಸ ನಡೆಸಲು ಪ್ರೋತ್ಸಾಹ ನೀಡಲಾಗುತ್ತಿದೆ. ಹಳ್ಳಿಯ ಮಕ್ಕಳು ಕಡಿಮೆ ಖರ್ಚಿನಲ್ಲಿ ಉತ್ತಮ ವಿದ್ಯೆ ಹೊಂದುವಂತಾಗಬೇಕೆಂಬ ಉದ್ದೇಶ ಪರಮ ಪೂಜ್ಯ ಪೇಜಾವರ ಶ್ರೀಗಳವರದ್ದು ಎಂಬುದು ಗಮನಾರ್ಹ.

Also Read  ಕಡಬ: ವಿವಾಹಿತ ಮಹಿಳೆ ನಾಪತ್ತೆ

ಶ್ರೀರಾಮಕುಂಜೇಶ್ವರ ಪ್ರಥಮ ದರ್ಜೆ ಕಾಲೇಜು ಪೇಜಾವರ ಮಠಾಧೀಶ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಜನ್ಮದಿನದ ಸ್ವರ್ಣಮಹೋತ್ಸವದ ಸವಿನೆನಪಿಗಾಗಿ ಸುತ್ತಮುತ್ತಲ ಹಳ್ಳಿಯ ರೈತರ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 2008ರಲ್ಲಿ ಸ್ಥಾಪನೆಯಾಗಿದೆ. ಕಲಿಕೆಗೆ ಪೂರಕವಾದ ವಿಷಯದ ಪ್ರಶಾಂತ ವಾತಾವರಣದಲ್ಲಿರುವ ಕಾಲೇಜು ಕೈಗೆಟುಕುವ ಶುಲ್ಕದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಾ ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಆಟದ ಮೈದಾನ, ಅತ್ಯಾಧುನಿಕ ಪ್ರಯೋಗಾಲಯ, ವಾಹನ ವಸತಿ, ಮೂಲಭೂತ ಸೌಕರ್ಯಗಳನ್ನು ಹಾಗೂ ಆಡಳಿತದೊಂದಿಗೆ 32 ವಿದ್ಯಾರ್ಥಿಗಳಿಂದ ಆರಂಭವಾಗಿ ಈಗ ಹೆಮ್ಮರವಾಗಿ ಬೆಳೆದು 350 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಲೇಜಿನ ಹೆಗ್ಗಳಿಕೆಗೆ ಕಲಶಪ್ರಾಯವಾಗಿ ವಿಜ್ಞಾನ ವಿಭಾಗವು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಂದ ಉದ್ಘಾಟನೆಯಾಗಿ ಇರುವುದು ಹೆಮ್ಮೆಯ ಸಂಗತಿಯಾಗಿದೆ. ಪೇಜಾವರ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ನೇತೃತ್ವದಲ್ಲಿ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳು ಸುತ್ತಲಿನ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ವಿದ್ಯಾದಾನ ಮಾಡುವ ಮಹಾನ್ ಕಾರ್ಯದಲ್ಲಿ ತೊಡಗಿದೆ. ಪದವಿ ವಿದ್ಯಾರ್ಥಿಗಳಿಗೆ ಐಎಎಸ್, ಕೆಎಎಸ್ ಮತ್ತು ವೃತ್ತಿ ಮಾರ್ಗದರ್ಶನ ತರಗತಿಗಳು, ಕಂಪ್ಯೂಟರ್ ತರಗತಿಗಳು ಕೂಡ ಇದೆ. ಸಂಸ್ಥೆಯಲ್ಲಿ ಹೊಸದಾಗಿ ಆರಂಭಗೊಂಡಿರುವ ಕಮ್ಯುನಿಟಿ ಲರ್ನಿಂಗ್ ಸೆಂಟರ್, ಕಂಪ್ಯೂಟರ್ ಹಾಗೂ ಕಂಪ್ಯೂಟರ್ ಆಧಾರಿತ ವೃತ್ತಿಪರ ಕೌಶಲ್ಯಗಳನ್ನು ಕಲಿಯುವ ಆಸಕ್ತಿ ಇರುವ ಪರಿಸರದ ಜನರಿಗೆ ವರದಾನವಾಗಿದೆ.

Also Read  ಪುತ್ತೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಸು ಓಡಾಟ ಆರಂಭ...!!!

error: Content is protected !!
Scroll to Top