(ನ್ಯೂಸ್ ಕಡಬ) newskadaba.com ಮಂಗಳೂರು, ಆ. 22. ಕೊರೋನಾ ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಗಳಿಂದ 28 ದಿನಗಳ ನಂತರ ಪ್ಲಾಸ್ಮಾವನ್ನು ತೆಗೆದು, ಕೋವಿಡ್ ನಿಂದ ಬಳಲುತ್ತಿರುವವರಿಗೆ ನೀಡಿದರೆ ಚೇತರಿಸಿಕೊಳ್ಳುವ ಸಾಧ್ಯತೆಗಳು ಅತೀ ಹೆಚ್ಚು. ಇದರಿಂದ ಹಲವಾರು ಜನರು ಚೇತರಿಸಿಕೊಳ್ಳುತ್ತಿದ್ದಾರೆ. ಈ ಪ್ಲಾಸ್ಮಾ ದಾನಕ್ಕೆ ಬೆಂಗಳೂರಿನಲ್ಲಿ ಮಾತ್ರ ಅವಕಾಶವಿದ್ದು, ಮಂಗಳೂರಿನಲ್ಲಿ ಸರ್ಕಾರ ಅವಕಾಶ ನೀಡಿರಲಿಲ್ಲ.
ಇದರ ಬಗ್ಗೆ 3 ದಿನಗಳ ಹಿಂದೆ ಪ್ರತಿಷ್ಠಿತ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ(ರಿ) ಪತ್ರಿಕಾಗೋಷ್ಠಿ ಕರೆದು ಮಂಗಳೂರಿನಲ್ಲಿ ಪ್ಲಾಸ್ಮಾ ತೆಗೆಯಲು ಸರಕಾರ ಅವಕಾಶ ನೀಡಬೇಕು ಎಂದು ಮನವಿ ಮಾಡಿತ್ತು.
ಈ ಮನವಿಗೆ ಸ್ಪಂದನೆ ಎಂಬಂತೆ ಇದೀಗ ಕರ್ನಾಟಕ ಸರ್ಕಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಕೇಂದ್ರ ತೆರೆಯಲು ಅವಕಾಶ ನೀಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾತನಾಡಿದ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಅಧ್ಯಕ್ಷ ನಝೀರ್ ಹುಸೈನ್ ಮಂಚಿಲ, ಸರ್ಕಾರ ಮಂಗಳೂರಿನಲ್ಲಿ ಪ್ಲಾಸ್ಮಾ ದಾನಕ್ಕೆ ಅವಕಾಶ ನೀಡಿದ್ದು ಬಹಳ ಸಂತೋಷ ನೀಡಿದೆ. ಸರ್ಕಾರಕ್ಕೆ ನಮ್ಮ ಸಂಸ್ಥೆಯ ವತಿಯಿಂದ ಪ್ರತ್ಯೇಕ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ನಮ್ಮ ಸಂಸ್ಥೆಯ ಅಧೀನದಲ್ಲಿ ಹಲವಾರು ಮಂದಿ ಬೆಂಗಳೂರಿಗೆ ತೆರಳಿ ಪ್ಲಾಸ್ಮಾ ದಾನ ಮಾಡಿದ್ದರು. ಇದೀಗ ಮಂಗಳೂರಿನಲ್ಲಿ ಅವಕಾಶ ದೊರೆತಿದ್ದು, ಕೋವಿಡ್-19 ನಿಂದ ಗುಣಮುಖರಾದ ಎಲ್ಲರೂ ಪ್ಲಾಸ್ಮಾ ದಾನ ಮಾಡಲು ಮುಂದೆ ಬರುವುದರ ಮೂಲಕ ಮತ್ತೊಬ್ಬರಿಗೆ ಸಹಕಾರಿಯಾಗಿ ಎಂದರು. ಹೆದರಿಕೆ ಹಾಗೂ ಸಂಕೋಚ ಬೇಡ. ದೈರ್ಯವಾಗಿ ಕೋವಿಡ್-19ನ್ನು ಎದುರಿಸೋಣ, ನಿಮ್ಮೊಂದಿಗೆ ನಮ್ಮ ಸಹಕಾರ ಎಂದಿಗೂ ಇದ್ದು, ಪ್ಲಾಸ್ಮಾ ದಾನ ಮಾಡುವವರು ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯನ್ನು ಸಂಪರ್ಕಿಸಿ ಎಂದರು.